ಆಗ್ರಾ: ವಿಶ್ವದಾದ್ಯಂತ ಅಳಿವಿನಂಚಿನಲ್ಲಿರುವ ಮೊಸಳೆಯ ಘರಿಯಲ್ ಪ್ರಭೇದಗಳು ಚಂಬಲ್ ನದಿಯಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಘರಿಯಲ್ ಪ್ರಭೇದಗಳು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದ್ದು, ವನ್ಯಜೀವಿ ಅರಣ್ಯ ಇಲಾಖೆಯ ಮೇಲ್ವಿಚಾರಣೆಯಲ್ಲಿ ಅವುಗಳನ್ನು ರಕ್ಷಿಸಲಾಗುತ್ತಿದೆ.
ಲಖನೌ ಕುಕ್ರೈಲ್ ಸಂತಾನೋತ್ಪತ್ತಿ ಕೇಂದ್ರದಲ್ಲಿ ಜನಿಸಿದ 35 ಘರಿಯಲ್ ಮೊಸಳೆಗಳನ್ನು ಚಂಬಲ್ ನದಿಯಲ್ಲಿ ಬಿಡಲಾಗಿದೆ. ಚಂಬಲ್ ನದಿ ಘಾಟ್‌ನ ನಂದಾಗ್ವಾನ್ನಲ್ಲಿ 12, ಸಹಸನ್ನಲ್ಲಿ 11 ಮತ್ತು ಮಹುವ ಸುಡಾದಲ್ಲಿ 12 ಮೊಸಳೆಗಳನ್ನು ಬಿಡಲಾಗಿದೆ.
ಮೊಸಳೆಗಳ ಮೊಟ್ಟೆಗಳನ್ನು ಚಂಬಲ್ ನದಿಯಿಂದ ಲಖನೌದ ಕುಕ್ರೈಲ್ ಸಂತಾನೋತ್ಪತ್ತಿ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಬಳಿಕ ಅವುಗಳನ್ನು ಚಂಬಲ್ ನದಿಯಲ್ಲಿ ಬಿಡಲಾಗಿದೆ. ಈ ಹಿಂದೆ ಅರಣ್ಯ ಇಲಾಖೆ ಮತ್ತು ತಜ್ಞರ ಸಮೀಕ್ಷೆಯಲ್ಲಿ 2176 ಘರಿಯಲ್ ಮೊಸಳೆಗಳಿದ್ದವು. ಈಗ ಅವುಗಳ ಸಂಖ್ಯೆ 2211ಕ್ಕೆ ಏರಿದೆ. ಚಂಬಲ್ ನದಿಯ ದಡದಲ್ಲಿ ಮೇ-ಜೂನ್‌ನಲ್ಲಿ ಮೊಸಳೆಗಳು ಮೊಟ್ಟೆಗಳಿಡುತ್ತವೆ. ಅಲ್ಲಿಂದ ಮೊಟ್ಟೆಗಳನ್ನು ಸಂಗ್ರಹಿಸಿ ಲಖನೌ ಕುಕ್ರೈಲ್ನ ಸಂತಾನೋತ್ಪತ್ತಿ ಕೇಂದ್ರಕ್ಕೆ ಕೊಂಡೊಯ್ಯಲಾಗುತ್ತದೆ.
ಸಂತಾನೋತ್ಪತ್ತಿ ಕೇಂದ್ರದಲ್ಲಿ ಮೊಟ್ಟೆಗಳಿಂದ ಮೊಸಳೆಗಳು ಹೊರಬರುತ್ತವೆ. ಬಳಿಕ ಮೊಸಳೆಗೆ ಮೂರು ವರ್ಷಗಳ ಕಾಲ ಮೀನುಗಳನ್ನು ನೀಡಿ ರಕ್ಷಿಸಲಾಗುತ್ತದೆ. ಅಲಿಗೇಟರ್ ಪ್ರಭೇದಗಳು ಪ್ರಪಂಚದಾದ್ಯಂತ ಅಳಿವಿನಂಚಿನಲ್ಲಿವೆ. ವಿಶ್ವದಾದ್ಯಂತ ಅಲಿಗೇಟರ್ ಪ್ರಭೇದಗಳು ಶೇ 80ರಷ್ಟು ಚಂಬಲ್ ನದಿಯಲ್ಲಿವೆ. ಆ ಮೊಸಳೆಗಳ ಕುಟುಂಬ ಪ್ರತಿವರ್ಷ ನಿರಂತರವಾಗಿ ಬೆಳೆಯುತ್ತಿವೆ.
1979 ರಿಂದ ಚಂಬಲ್ ನದಿಯಲ್ಲಿರುವ ಮೊಸಳೆ ಪ್ರಭೇದಗಳನ್ನು ಅರಣ್ಯ ಇಲಾಖೆಯ ಮೇಲ್ವಿಚಾರಣೆಯಲ್ಲಿ ಸಂರಕ್ಷಿಸಲಾಗುತ್ತಿದೆ. ಇದನ್ನು ನೋಡಲು ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪ್ರವಾಸಿಗರು ದೈತ್ಯ ಮೊಸಳೆಯನ್ನು ನೋಡಿ ಸಂತೋಷಪಡುತ್ತಾರೆ.