ರತ್ಲಾಮ್(ಮಧ್ಯಪ್ರದೇಶ) : ತನ್ನ ಪತ್ನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಪ್ರತೀಕಾರವಾಗಿ ಸ್ಫೋಟಕಗಳಿಂದ ವ್ಯಕ್ತಿಯನ್ನು ಕೊಂದ 32 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಾದ ಭನ್ವರ್ ಲಾಲ್ ಮತ್ತು ದಿನೇಶ್ ಅವರನ್ನು ಸಹ ಬಂಧಿಸಲಾಗಿದೆ. ರತ್ಲಾಮ್ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ತಿವಾರಿ ಈ ಸಂಬಂಧ ಮಾತನಾಡಿ . ಜನವರಿ 4 ರಂದು ಹಳ್ಳಿಯ ಲಾಲ್ ಸಿಂಗ್ ಅವರು ತಮ್ಮ ಕೃಷಿ ಭೂಮಿಯಲ್ಲಿನ ಕೊಳವೆ ಬಾವಿಯ ಬಳಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದ್ದರು. ಜಿಲೆಟಿನ್ ರಾಡ್ ಮತ್ತು ಡಿಟೋನೇಟರ್ ನಿಂದಾಗಿ ಸ್ಫೋಟ ಸಂಭವಿಸಿದೆ ಎಂದು ವಿಧಿವಿಜ್ಞಾನ ತಜ್ಞರು ಮಾಹಿತಿ ನೀಡಿದ್ದಾರೆ. ತನಿಖೆಯಲ್ಲಿ ಮಾಜಿ ಸರಪಂಚ್ ಭನ್ವರ್ ಲಾಲ್ ಅವರ ಕೊಳವೆ ಬಾವಿಯಲ್ಲಿ ಆಗಸ್ಟ್‌ನಲ್ಲಿ ಇದೇ ರೀತಿಯ ಸ್ಫೋಟ ಸಂಭವಿಸಿದೆ ಎಂದು ಕಂಡುಬಂದಿದೆ, ಆದರೆ ಘಟನೆಯಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ಗ್ರಾಮದಿಂದ ಕಾಣೆಯಾದ ಕುಟುಂಬವನ್ನು ಪೊಲೀಸರು ಪತ್ತೆ ಮಾಡಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಪೊಲೀಸರು ಜನವರಿ 7 ರಂದು ಮಂದಸೌರ್‌ನಿಂದ ಆರೋಪಿ ಮತ್ತು ಅವರ ಕುಟುಂಬ ಸದಸ್ಯರನ್ನು ವಶಕ್ಕೆ ತೆಗೆದುಕೊಂಡರು. ವಿಚಾರಣೆಯ ಸಮಯದಲ್ಲಿ ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಅವನು ತನ್ನ ಹೆಂಡತಿಯ ಸಾಮೂಹಿಕ ಅತ್ಯಾಚಾರದ ಪ್ರತೀಕಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ.
ಈ ವರ್ಷದ ಜುಲೈನಲ್ಲಿ ಲಾಲ್ ಸಿಂಗ್, ಭವರ್‌ಲಾಲ್ ಹಾಗೂ ದಿನೇಶ್ ಈತನ ಮನೆಗೆ ನುಗ್ಗಿ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದರಂತೆ. ಈ ವೇಳೆ ಘಟನೆ ತಡೆಯಲು ಯತ್ನಿಸಿದಾಗ ಅತ್ಯಾಚಾರಿಗಳು ಥಳಿಸಿದ್ದರಂತೆ. ಇದಾದ ನಂತರ ವಿಷಯವನ್ನು ಪೊಲೀಸರಿಗೆ ತಿಳಿಸಿದೆ ತಾನೇ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಎಂದು ಹೇಳಲಾಗಿದೆ.
ಈ ಅಪರಾಧದಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಪಾತ್ರದ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.