ಲಾಹೌಲ್-ಸ್ಪಿತಿ: ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆ ಲಾಹೌಲ್-ಸ್ಪಿತಿಯಲ್ಲಿ ಬುಧವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಪರಿಣಾಮ ಈ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ.
ಮನಾಲಿ-ಲೇಹ್ ರಸ್ತೆಯ ಬಾರಾಲಾಚಾ ಬಳಿ ರಸ್ತೆಯಲ್ಲಿ ಭಾರಿ ಭೂಕುಸಿತ ಉಂಟಾಗಿರುವ ಪರಿಣಾಮ ವಾಹನ ಸಂಚಾರದ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಯಿತು. ಭೂಕುಸಿತದಿಂದಾಗಿ ಗ್ರಾಂಫು ಬಳಿ ರಾಷ್ಟ್ರೀಯ ಹೆದ್ದಾರಿ 505 ರಲ್ಲಿ 30 ಪ್ರಯಾಣಿಕರು ಸಿಲುಕಿಕೊಂಡು ಪರದಾಡಿದ್ದಾರೆ.
ಎನ್‌ಹೆಚ್ -505 ರಲ್ಲಿನ ಗ್ರ್ಯಾಮ್‌ಫುಗಿಂತ ಒಂಬತ್ತು ಕಿ ಮೀ ದೂರದಲ್ಲಿರುವ ಲಾಹೌಲ್ನಲ್ಲಿ ಆರು ವಾಹನಗಳು ಸಿಕ್ಕಿಬಿದ್ದಿದ್ದು, ಪರಿಣಾಮ 30 ಜನ ಪ್ರಯಾಣಿಕರು ಪರದಾಡಿದ್ದಾರೆ. ಇದರಲ್ಲಿ ಐದು ಮಕ್ಕಳು ಸಿಲುಕಿದ್ದರು ಎಂಬುದಾಗಿ ತಿಳಿದು ಬಂದಿದೆ. ಪರಿಣಾಮ ಸ್ಥಳಕ್ಕೆ ದೌಡಾಯಿಸಿದ ಪೊಲೀಸರ ತಂಡ ಸಂತ್ರಸ್ತರನ್ನು ರಕ್ಷಿಸಿ ಪಿಡಬ್ಲ್ಯುಡಿ ಅತಿಥಿ ಗೃಹ ಮತ್ತು ಹತ್ತಿರದ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಿದ್ದಾರೆ.
ಗಡಿ ರಸ್ತೆಗಳ ಸಂಘಟನೆಯ ತಂಡವು ತನ್ನ ಯಂತ್ರೋಪಕರಣಗಳೊಂದಿಗೆ ಭೂ ಕುಸಿತವಾದ ಸ್ಥಳದ ಕಡೆಗೆ ಸಾಗಿ ವಾಹನ ಸಂಚಾರಕ್ಕೆ ರಸ್ತೆಯನ್ನು ತೆರವುಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.