ಅಯೋಧ್ಯಾ/ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಮೂರು ರಾಮನ ವಿಗ್ರಹಗಳನ್ನು ಕೆತ್ತಲಾಗುತ್ತಿದೆ. ಇದರಲ್ಲಿ ಎರಡು ಕರ್ನಾಟಕದ ಶಿಲ್ಪಿಗಳು ರೂಪಿಸುತ್ತಿದ್ದರೆ, ಇನ್ನೊಂದನ್ನು ರಾಜಸ್ಥಾನದ ಶಿಲ್ಪಿ ಕೆತ್ತುತ್ತಿದ್ದಾರೆ. ಇದರಲ್ಲಿ ಅತ್ಯುತ್ತಮವಾದ ಶ್ರೀರಾಮನ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಮುಂದಿನ ವರ್ಷದ ಜನವರಿ 22 ರಂದು ರಾಮನ ಪಟ್ಟಾಭಿಷೇಕ ನಡೆಯಲಿದೆ. ಜಗತ್ತೇ ಕಾಯುತ್ತಿರುವ ಅಂದಿನ ಕಾರ್ಯಕ್ರಮದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಮುಖ್ಯ ಘಟ್ಟವಾಗಿದೆ. ಇದಕ್ಕಾಗಿ ಕರ್ನಾಟಕದ ಮೈಸೂರು ಮೂಲದ ಅರುಣ್ ಯೋಗಿರಾಜ್ ಮತ್ತು ಉತ್ತರ ಕನ್ನಡದ ಗಣೇಶ್ ಭಟ್ ಅವರು ಕಾರ್ಕಳದ ಶಿಲೆಯಲ್ಲಿ ಮೂರ್ತಿಯನ್ನು ಕೆತ್ತುತ್ತಿದ್ದಾರೆ. ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ರಾಜಸ್ಥಾನದ ಬಿಳಿಯ ಶಿಲೆಯಲ್ಲಿ ಮೂರ್ತಿ ಕೆತ್ತುತ್ತಿದ್ದಾರೆ.
ಯಾವ ಶಿಲೆಗೆ ಗರ್ಭಗುಡಿ ಸೇರುವ ಭಾಗ್ಯ: ರಾಮಲಲ್ಲನ ವಿಗ್ರಹವನ್ನು ಕರ್ನಾಟಕ ಹಾಗೂ ರಾಜಸ್ಥಾನದಿಂದ ತಂದಂತಹ ಶಿಲೆಗಳಲ್ಲಿ ಕೆತ್ತಲಾಗುತ್ತಿದೆ. ಇದರಲ್ಲಿ ಯಾವುದು ಪ್ರತಿಷ್ಠಾಪನೆಗೆ ಆಯ್ಕೆಯಾಗುತ್ತದೆ ಎಂಬುದನ್ನು ಟ್ರಸ್ಟ್‌ನ ಧಾರ್ಮಿಕ ಮಂಡಳಿ ಆಯ್ಕೆ ಮಾಡಲಿದೆ. ಒಂದನ್ನು ಗರ್ಭಗುಡಿಯನ್ನು ಪ್ರತಿಷ್ಠಾಪಿಸಿದರೆ, ಇನ್ನೆರಡನ್ನು ಮಂದಿರದ ಇತರ ಭಾಗಗಳಲ್ಲಿ ಇರಿಸಲಾಗುವುದು ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ. ಇದರಲ್ಲಿ ಒಂದನ್ನು ಐದು ವರ್ಷದ ಮಗುವಿನ ಜೀವಂತಿಕೆಯನ್ನು ತೋರಿಸುವ ಮಾದರಿಯಲ್ಲಿದೆ ಎಂದು ಟ್ರಸ್ಟ್ ಹೇಳಿದೆ.
ಮೂರ್ತಿ ಆಯ್ಕೆಯು ಶೀಘ್ರದಲ್ಲೇ ನಡೆಯಲಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ವೈದಿಕ ವಿಧಿವಿಧಾನಗಳು ಜನವರಿ 16 ರಂದೇ ಆರಂಭವಾಗಲಿದೆ. ಮಹಾಮಸ್ತಕಾಭಿಷೇಕದ ಮುಖ್ಯ ವಿಧಿ ವಿಧಾನಗಳನ್ನು ಗಣೇಶ್ವರ ಶಾಸ್ತ್ರಿ ದ್ರಾವಿಡ್ ಮತ್ತು ಲಕ್ಷ್ಮೀಕಾಂತ ದೀಕ್ಷಿತ್ ನೆರವೇರಿಸಲಿದ್ದಾರೆ.
ಗಣ್ಯರಿಗೆ ಆಹ್ವಾನ: ರಾಮ ಮಂದಿರ ಉದ್ಘಾಟನೆಗೆ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ದೇಶದ 7000 ಕ್ಕೂ ಅಧಿಕ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಇದರಲ್ಲಿ 4 ಸಾವಿರ ಸಾಧು ಸಂತರಿಗೆ ಆಹ್ವಾನಿಸಲಾಗಿದೆ. ಇವರೊಂದಿಗೆ ಉದ್ಯಮಿ ರತನ್ ಟಾಟಾ, ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಅನೇಕ ಉದ್ಯಮಿಗಳು, ಕರಸೇವೆಯಲ್ಲಿ ಬಲಿದಾನ ಮಾಡಿದವರ ಕುಟುಂಬ ಹಾಗೂ ರಾಮಾಯಣ ಧಾರಾವಾಹಿಯಲ್ಲಿ ಪಾತ್ರವಹಿಸಿದ ಅರುಣ್ ಗೋವಿಲ್ ಹಾಗೂ ದೀಪಿಕಾ ಚಿಕ್ಲಿಯಾ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ಅಯೋಧ್ಯೆಯಲ್ಲಿ ಬಿಗಿಭದ್ರತೆ: ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆ ಭೇಟಿ ನೀಡುವ ಭಕ್ತರಿಗೆ ರಕ್ಷಣೆ ನೀಡಲು ಸರ್ಕಾರ ಸಕಲ ಸಿದ್ಧತೆ ನಡೆಸುತ್ತಿದೆ. ಭದ್ರತಾ ಕ್ರಮಗಳನ್ನು ಹೆಚ್ಚಿಸುತ್ತಿದೆ. ನಗರಾದ್ಯಂತ ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದರ ನಿಗಾಕ್ಕೆ ಡ್ರೋನ್‌ಗಳನ್ನು ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ: ರಿಷಬ್ ಶೆಟ್ಟಿ, ಯಶ್ ಸೇರಿ ಚಿತ್ರರಂಗದ ಖ್ಯಾತನಾಮರಿಗೆ ಆಹ್ವಾನ