ಸೂರಜ್‌ಪುರ (ಛತ್ತೀಸ್ಗಢ): ಬಾವಿಯ ಗುಂಡಿ ತೋಡುವಾಗ ಗುಡ್ಡದ ಭಾಗವೊಂದು ಕುಸಿದು ಮಣ್ಣಿನಡಿ ಸಿಲುಕಿ ಮೂವರು ಸಾವನ್ನಪ್ಪಿದ ಘಟನೆ ಇಲ್ಲಿನ ಧಡೇಸೇರಿ ಗ್ರಾಮದಲ್ಲಿ ನಡೆದಿದೆ. 6 ಮಂದಿ ಮಣ್ಣಿನಡಿ ಸಿಲುಕಿದ್ದು ಅದರಲ್ಲಿ ಮೂವರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಒಡ್ಗಿ ಪೊಲೀಸ್ ಠಾಣೆ ವ್ಯಾಪ್ತಿಯ ಧಡೇಸೇರಿ ಗ್ರಾಮದಲ್ಲಿ ಶನಿವಾರ ಸಂಜೆ ಆರು ಜನರು ಬಾವಿ ಅಗೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಿದರು.
ದಿನದ ಕೆಲಸವನ್ನು ಮುಗಿಸಲು ಹೊರಟಿದ್ದಾಗ, ಒಂದು ದಿಬ್ಬದ ಮಣ್ಣು ಕುಸಿದು ಬಿದ್ದಿದೆ. ಹೀಗಾಗಿ ಎಲ್ಲಾ ಆರು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. ತಕ್ಷಣವೇ ಸ್ಥಳೀಯ ಜನರು ಅವಶೇಷಗಳಿಂದ ಮೂರು ಜನರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ತಂಡ ಭಾನುವಾರ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ನಾನ್ಸಾಯ್ ಪಾಂಡೊ (58) ಎಂಬುವರ ಮೃತದೇಹ ಹೊರತೆಗೆಯಲಾಗಿದೆ. ಇನ್ನುಳಿದಂತೆ ದಾಗೇಂದ್ರ ಸಿಂಗ್ (34) ಮತ್ತು ಸಜ್ಜನ್ ಸಿಂಗ್ ಗಾಡ್ (42) ಅವರ ದೇಹ ಹೊರತೆಗೆಯಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ ಎಂದು ಸೂರಜ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಕ್ರೇಜಾ ಹೇಳಿದ್ದಾರೆ.
ಪೊಲೀಸರ ಪ್ರಕಾರ ಇವರು ಮನರೇಗಾ ಯೋಜನೆಯಡಿ ಬಾವಿ ಅಗೆಯುತ್ತಿದ್ದ ಕಾರ್ಮಿಕರು ಎಂದು ತಿಳಿದುಬಂದಿದೆ.
ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಕ್ಕೆ 5.25 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವಂತೆ ಸೂರಜ್‌ಪುರ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.