ಕಾರ್ಗಿಲ್, ಲಡಾಖ್ : ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ ಕಾರ್ಗಿಲ್ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ನಡೆದ ನಿಗೂಢ ಸ್ಫೋಟದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಆಗಸ್ಟ್ 18ರ ತಡರಾತ್ರಿ ದ್ರಾಸ್ ಪಣ್ಣದ ಕಬಾಡಿ ನಲ್ಹಾದಲ್ಲಿ ಸಭವಿಸಿದ ಈ ಸ್ಫೋಟದಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದರು. ಉಳಿದ ಗಾಯಾಳುಗಳೊಂದಿಗೆ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಮೂಲಕ ಮೃತರ ಸಂಖ್ಯೆ ಮೂರಕ್ಕೆ ಏರಿದೆ ಎಂದು ಕಾರ್ಗಿಲ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ. ಗಾಯಾಳುಗಳನ್ನು ದ್ರಾಸ್ನ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರದಂದು ಕಬಾಡಿ ನಲ್ಹಾದ ಸ್ಕ್ರ್ಯಾಪ್ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದ್ದು, ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಪೊಲೀಸ್ ಪಡೆ ದೌಡಾಯಿಸಿ ಪರಿಶೀಲನೆ ಕೈಗೊಂಡಿತ್ತು. ಸ್ಫೋಟದ ಸ್ವರೂಪ ಇನ್ನೂ ತಿಳಿದು ಬಂದಿಲ್ಲ. ಸ್ಫೋಟದಲ್ಲಿ ಗಾಯಗೊಂಡವರನ್ನು ದ್ರಾಸ್ ಉಪ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಗಾಯಗೊಂಡ ವ್ಯಕ್ತಿಗಳನ್ನು ಇನ್ನೂ ಗುರುತಿಸಲಾಗಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಸ್ಫೋಟದ ಸ್ವರೂಪವನ್ನು ತನಿಖೆ ಮಾಡಲಾಗುತ್ತಿದೆ ಎಂದು ಕಾರ್ಗಿಲ್ ಎಸ್ಎಸ್ಪಿ ಅನಾಯತ್ ಅಲಿ ಚೌಧರಿ ಹೇಳಿದ್ದಾರೆ. ಈ ಘಟನೆ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಓದಿ: ಮನೆ ಮಾಲೀಕನ ಅಂತ್ಯ ಸಂಸ್ಕಾರಕ್ಕೆ ತೆರಳಿದ್ದ ಮನೆ ಮಂದಿ.. ಗ್ಯಾಸ್ ಸ್ಫೋಟಗೊಂಡು ಮನೆ, ಕೊಟ್ಟಿಗೆ ಸುಟ್ಟು ಕರಕಲು
ಪ್ರಧಾನಿ ಮೋದಿ ಹತ್ಯೆ ಬೆದರಿಕೆ ಸಂದೇಶ: ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸೇರಿದಂತೆ ದೇಶಾದ್ಯಂತ ಸರಣಿ ಬಾಂಬ್ ಸ್ಫೋಟದ ಬೆದರಿಕೆ ಕರೆ, ಪತ್ರಗಳ ಸರಣಿ ಮುಂದುವರಿದಿದೆ. ಆಗಸ್ಟ್ 9ರ ಬುಧವಾರ ಕೂಡ ಮತ್ತೊಂದು ಬೆದರಿಕೆ ಪತ್ರ ರವಾನಿಸಲಾಗಿದೆ. ವಿಶೇಷ ಎಂದರೆ ಅದು ವಿದೇಶದಿಂದ ಬಂದಿದೆ. ಅದರಲ್ಲಿ ಮೋದಿ ಹತ್ಯೆ ಮಾಡಿ, ವಿವಿಧೆಡೆ ಸ್ಫೋಟಕ್ಕೆ ಸಂಚು ರೂಪಿಸಿದ ಬಗ್ಗೆ ಮಾಹಿತಿ ನೀಡಲಾಗಿದೆ.
ಪುಣೆಯ ದೀನಾನಾಥ್ ಆಸ್ಪತ್ರೆಯ ವ್ಯಕ್ತಿಯೊಬ್ಬರಿಗೆ ಈ ಇಮೇಲ್ ಬಂದಿದೆ. ತಕ್ಷಣವೇ ಅವರು ನಗರ ಪೊಲೀಸ್ ಪಡೆಯ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಮೋಖಿಮ್ ಎಂಬ ಹೆಸರಿನಲ್ಲಿ ಈ ಬೆದರಿಕೆ ಇಮೇಲ್ ಕಳುಹಿಸಲಾಗಿದೆ. ಅದು ಎಲ್ಲಿಂದ ಬಂತು ಎಂಬ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.