ಪಿತೋರಗಢ (ಉತ್ತರಾಖಂಡ): ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 8.58ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪನಲ್ಲಿ 3.8 ತೀವ್ರತೆ ದಾಖಲಾಗಿದೆ. ಭೂಕಂಪನದಿಂದ ಯಾವುದೇ ಪ್ರಾಣಹಾನಿ ಬಗ್ಗೆ ತಿಳಿದುಬಂದಿಲ್ಲ. ಭೂಕಂಪನದ ಕೇಂದ್ರ ಬಿಂದು ಅಕ್ಷಾಂಶ 29.78 ಮತ್ತು ರೇಖಾಂಶ 80.13ರಲ್ಲಿ, 10 ಕೀ.ಮೀ ಆಳದಲ್ಲಿ ಭೂಕಂಪನವಾಗಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ದೇಶವನ್ನು ವಲಯ-II, ವಲಯ-III, ವಲಯ- IV ಮತ್ತು ವಲಯ-V ಎಂದು ನಾಲ್ಕು ಭೂಕಂಪನ ವಲಯಗಳಾಗಿ ವಿಂಗಡಿಸಿದೆ. ಈ ನಾಲ್ಕು ವಲಯಗಳಲ್ಲಿ ವಲಯ-V, ಅತಿ ಹೆಚ್ಚು ಭೂಕಂಪನ ಸಕ್ರಿಯ ವಲವಾಗಿದ್ದು, ವಲಯ-II ಅತಿ ಕಡಿಮೆ ಭೂಕಂಪನ ವಲಯವಾಗಿದೆ.
ಪಿಥೋರಗಡ್, ಬಾಗೇಶ್ವರ್, ಉತ್ತರಕಾಶಿ, ಚಮೋಲಿ ಮತ್ತು ರುದ್ರಪ್ರಯಾಗ ಈ ಜಿಲ್ಲೆಗಳು ಭೂಕಂಪನ ವಲಯ-Vರ ಅಡಿಯಲ್ಲಿ ಬರುತ್ತವೆ. ಕಳೆದ ಡಿಸೆಂಬರ್ನಲ್ಲಿ ಉತ್ತರಕಾಶಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿತ್ತು. 2023ರ ಆರಂಭದಲ್ಲಿ, ಉತ್ತರಾಖಂಡದ ಜೋಶಿಮಠ ತೀವ್ರ ಭೂ ಕುಸಿತಕ್ಕೆ ಸಾಕ್ಷಿಯಾಯಿತು, ಜೋಶಿಮಠ ಪಟ್ಟಣದಲ್ಲಿ 9 ಕಡೆ ಭೂ ಕುಸಿತದಿಂದ ಭಾರಿ ನಷ್ಟವನ್ನು ಅನುಭವಿಸುತ್ತಿದೆ ಮತ್ತು ಅತೀಯಾದ ಚಳಿಯಿಂದ ಜನರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ನಗರ ಪ್ರದೇಶದ ಮನೆ ಗೋಡೆಗಳ ಮೇಲೆ ಬಿರುಕು ಬಿಟ್ಟಿದ್ದು ದಿನದಿಂದ ದಿನಕ್ಕೆ ಬಿರುಕುಗಳು ದೊಡ್ಡದಾಗುತ್ತಿದ್ದು, ಜನರು ಭಯದಿಂದ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜೋಶಿಮಠದಲ್ಲಿ ನಿರಂತರ ಭೂಕುಸಿತದಿಂದ ಪಟ್ಟಣದ 561 ಮನೆಗಳು ಬಿರಕು ಬಿಟ್ಟಿದೆ ಎಂದು ವರದಿಯಾಗಿದೆ, ರವಿಗ್ರಾಮದಲ್ಲಿ 153 ಮನೆಗಳು, ಗಾಂಧಿನಗರದಲ್ಲಿ 127, ಮನೋಹರ್ಬಾಗ್ನಲ್ಲಿ 71, ಸಿಂಗ್ದಾರ್ನಲ್ಲಿ 52, ಪರ್ಸಾರಿಯಲ್ಲಿ 50, ಸುನೀಲ್ನಲ್ಲಿ 27, ಮಾರ್ವಾಡಿಯಲ್ಲಿ 28, ವಿವಿಧ ಪ್ರದೇಶದಲ್ಲಿ 24 ಸೇರಿದಂತೆ ಒಟ್ಟು 561 ಮನೆಗಳು ಬಿರುಕು ಬಿಟ್ಟಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಮನೆಗಳಲ್ಲಿ ಬಿರುಕು ಬಿಟ್ಟಿರುವುದರಿಂದ ಸಾಕಷ್ಟು ಕುಟುಂಬಗಳು ವಲಸೆ ಸಹ ಹೋಗಿದ್ದಾರೆ ಎಂದು ವರದಿಯಾಗಿದೆ.
ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ)ನ ಅಧಿಕಾರಿ ಹಿಮಾಂಶು ಖುರಾನ ಅವರು ಜೋಶಿಮಠದ ಸಂತ್ರಸ್ತರ ಸ್ಥಳಾಂತರಕ್ಕಾಗಿ ಗುರುತಿಸಲಾದ ಭೂಮಿಯನ್ನು ಭಾನುವಾರ ಪರಿಶೀಲಿಸಿದರು, ನಂತರ , ಢಾಕಾ ಗ್ರಾಮದ ಭೂಮಿಯ ಬಾಹ್ಯ ರೇಖೆಯ ನಕ್ಷೆಯನ್ನು ಶೀಘ್ರವಾಗಿ ಸಿದ್ಧಪಡಿಸಲು ಗ್ರಾಮೀಣ ಕಾಮಗಾರಿ ಇಲಾಖೆಗೆ ಸೂಚಿಸಿದರು. ಸಂತ್ರಸ್ತರ ಬೇಡಿಕೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ, ಸ್ಥಳಾಂತರಕ್ಕೆ ವಿವರವಾದ ಯೋಜನೆಯನ್ನು ಕೇಂದ್ರಿಯ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್ಐ) ಸಿದ್ಧಪಡಿಸುತ್ತದೆ ಎಂದು ಜನರಿಗೆ ಭರವಸೆ ನೀಡಿದರು.
ಜೋಶಿಮಠದಲ್ಲಿನ ಕಟ್ಟಡಗಳಲ್ಲಿನ ಬಿರುಕುಗಳ ಹಾನಿ ಮತ್ತು ಪ್ರಗತಿಯನ್ನು ನಿರ್ಣಯಿಸಲು ಸಿಬಿಆರ್ಐ ಭೂಮಿ ಕುಸಿತದಿಂದ ಹಾನಿಗೊಳಗಾದ ಮನೆಗಳಲ್ಲಿ ಕ್ರ್ಯಾಕ್ ಮೀಟರ್‌ಗಳನ್ನು ಅಳವಡಿಸಿದೆ. ಉತ್ತರಾಖಂಡದ ಜೋಶಿಮಠದ ಕುಸಿತಕ್ಕೆ ಒಳಗಾದ 'ಅಸುರಕ್ಷಿತ' ಕಟ್ಟಡಗಳ ನೆಲಸಮ ಶನಿವಾರ ಪುನರಾರಂಭವಾಗಿದೆ. ಈಗ ಬಿರುಕು ಬಿಟ್ಟಿರುವ ಕಟ್ಟಡಗಳಲ್ಲಿ ಸುಮಾರು 181 ಕಟ್ಟಡಗಳನ್ನು ಅಸುರಕ್ಷಿತ ವಲಯದಲ್ಲಿ ಇರಿಸಲಾಗಿದೆ ಎಂದು ಡಿಎಂ ಮಾಹಿತಿ ನೀಡಿದರು.
ಇದನ್ನೂ ಓದಿ: ಸಿಎಂ ಕಾರ್ಯದರ್ಶಿ ಮನೆಗೆ ರಾತ್ರಿ ನುಗ್ಗಿದ ಆಗಂತುಕ.. ಸಮಯಪ್ರಜ್ಞೆಯಿಂದ ಬದುಕುಳಿದ ಮಹಿಳಾ ಅಧಿಕಾರಿ