ಮುರ್ಷಿದಾಬಾದ್ (ಪಶ್ಚಿಮ ಬಂಗಾಳ): ಇಲ್ಲಿಯ ಲಾಲ್ಬಾಗ್ನ ಸದರ್ಘಾಟ್ ಬಳಿ ಭಾಗೀರಥಿ ನದಿಗೆ ಕಾರೊಂದು ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ದೋಣಿಯ ಮೂಲಕ ನದಿಯ ಮತ್ತೊಂದು ತೀರಕ್ಕೆ ಕಾರನ್ನು ಸಾಗಿಸುವ ವೇಳೆ ಈ ಅವಘಡ ಸಂಭವಿಸಿದೆ.
ಕಾರಿನಲ್ಲಿ ಚಾಲಕ ಸೇರಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ 4 ಜನರನ್ನು ರಕ್ಷಿಸಲಾಗಿದೆ, ಉಳಿದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸದ್ಯ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಮೃತರ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ನದಿ ದಡದಲ್ಲಿ ನಾವಿಕರು ರಕ್ಷಣಾ ಕಾರ್ಯ ನಡೆಸಿದ್ದರು. ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಕಾರನ್ನು ತಡೆದು ಕಿಟಕಿ ಗಾಜುಗಳನ್ನು ಒಡೆದು ನಾಲ್ವರನ್ನು ರಕ್ಷಿಸಿದ್ದಾರೆ. ಈ ವೇಳೆ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರೆಲ್ಲ ನದಿ ದಾಟಿ ಕಿರೀಟೇಶ್ವರಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ರಿಂಕು ಗೋರಾಯಿ ಎಂಬುವರು ಮಾತನಾಡಿ, ಬೆಳಗಿನ ಜಾವ ದೋಣಿ ತುಂಬಾ ಜನದಟ್ಟಣೆಯಿಂದ ಕೂಡಿತ್ತು. ಈ ವೇಳೆ ಕಾರು ಕೂಡ ದೋಣಿಯಲ್ಲೇ ಇತ್ತು. ಪ್ರಯಾಣಿಕರ ಭಾರದಿಂದ ದೋಣಿಯ ಒಂದು ಬದಿ ಬಹುತೇಕ ವಾಲಿತ್ತು. ಆಗ ಕಾರು ಪಲ್ಟಿಯಾಗಿ ನದಿಗೆ ಬಿದ್ದಿತು. ಈ ವೇಳೆ ದಡದಲ್ಲಿದ್ದ ನಾವಿಕರು ನದಿಗೆ ಹಾರಿ 4 ಜನರನ್ನು ರಕ್ಷಿಸಿದರು. ಉಳಿದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಘಟನೆ ಬಳಿಕ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದರಘಾಟ್‌ನಲ್ಲಿ ನದಿ ದಾಟಬೇಕಾದರೇ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಪ್ರತಿದಿನವೂ ನದಿ ದಾಟಿ ಅನಿವಾರ್ಯವಾಗಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಇಂತಹ ಘಟನೆ ಸಂಭವಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಕಾರೊಂದು ನದಿಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದರು ಎಂದು ದೂರಿದರು.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮುರ್ಷಿದಾಬಾದ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿಂದಿನ ಘಟನೆಗಳು: ನಿಯಂತ್ರಣ ತಪ್ಪಿದ ಕಾರೊಂದು ಚಂಬಲ್ ನದಿಗೆ ಉರುಳಿಬಿದ್ದು ಮದುಮಗ ಸೇರಿ 9 ಮಂದಿ ಸಾವನ್ನಪ್ಪಿದ್ದ ಘಟನೆ ರಾಜಸ್ಥಾನದ ಕೋಟಾ ನಗರದಲ್ಲಿ ಇತ್ತೀಚೆಗೆ ನಡೆದಿತ್ತು.
ಇದನ್ನೂ ಓದಿ: ಜಿಲ್ಲಾಧಿಕಾರಿ ಕಾರು ಅಪಘಾತ: ಮೂವರು ಸಾವು, ಇಬ್ಬರಿಗೆ ಗಾಯ