ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶೇಕಡಾ 28 ರಷ್ಟು ಮನೆಗಳಲ್ಲಿ ಶೀತ, ಜ್ವರ ರೋಗ ಲಕ್ಷಣ ಹೊಂದಿರುವ ಒಬ್ಬರು, ಇಬ್ಬರು ಇದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಜ್ವರ, ತಲೆನೋವು, ಶೀತ, ಮೈಕೈ ನೋವು ಕೋವಿಡ್ ರೋಗ ಲಕ್ಷಣಗಳಾಗಿರುವುದರಿಂದ ಕೋವಿಡ್ ಮೂರನೇ ಅಲೆ ಶುರುವಾಗಿದ್ಯಾ ಅನ್ನೋ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ವೈರಸ್ ಹರಡುವುದನ್ನು ತಡೆಯಲು ಕೊರೊನಾ ತಪಾಸಣೆಗಳನ್ನು ತೀವ್ರಗೊಳಿಸಬೇಕು ಎಂದು ದೆಹಲಿ ಸರ್ಕಾರಕ್ಕೆ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಸೂಚಿಸಿದೆ.
ದೆಹಲಿಯಲ್ಲಿ ಶೇಕಡಾ 6 ರಷ್ಟು ಜನರು ಜ್ವರ ರೀತಿಯ ಲಕ್ಷಣ ಹೊಂದಿದ್ದಾರೆ. ಶೇಕಡಾ 11 ರಷ್ಟು ಜನರು ಶೀತ, ಕೆಮ್ಮು ರೀತಿಯ ರೋಗ ಲಕ್ಷಣ ಹೊಂದಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇಕಡಾ 72 ರಷ್ಟು ಜನರ ಮನೆಯಲ್ಲಿ ಎಲ್ಲರೂ(ಯಾವುದೇ ರೋಗ ಲಕ್ಷಣಗಳಿಲ್ಲದೇ) ಆರೋಗ್ಯವಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಲೋಕಲ್ ಸರ್ಕಲ್ ಪ್ರಕಾರ, ಆಗಸ್ಟ್15 ರಿಂದ ದೆಹಲಿಯ ಬಹುತೇಕರು ಕೋವಿಡ್ ರೀತಿಯ ರೋಗ ಲಕ್ಷಣಗಳನ್ನು ಹೊಂದಿದ್ದರು. ಆದರೆ, RT-PCR ಪರೀಕ್ಷೆಯ ಬಳಿಕ ಅವರಿಗೆ ನೆಗೆಟಿವ್ ವರದಿ ಬಂದಿದೆ. ವೈರಲ್ ಫೀವರ್, ಪ್ರತಿಕೂಲ ವಾತಾವರಣದಿಂದ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ.
ರಾಜಧಾನಿಯಲ್ಲಿ ನಿತ್ಯ 50 ರಿಂದ 60 ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಬದಲಾಗುತ್ತಿರುವ ಹವಾಮಾನ, ಅಧಿಕ ಮಳೆಯಿಂದಾಗಿ ರೋಗ ಲಕ್ಷಣಗಳು ಉಲ್ಬಣಗೊಳ್ಳುತ್ತಿವೆ.
ಇದನ್ನೂ ಓದಿ: ಇಳಿಕೆ ಕಂಡ ಕೊರೊನಾ.. 26,115 ಹೊಸ ಕೋವಿಡ್ ಕೇಸ್ಗಳು ಪತ್ತೆ: 252 ಮಂದಿ ಸಾವು