ನವದೆಹಲಿ: ಕಿಡ್ನ್ಯಾಪ್ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ 27 ವರ್ಷದ ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅಪರಾಧಿ ನಿಧಿಯನ್ನು ಉತ್ತರಪ್ರದೇಶದ ಗಾಜಿಯಾಬಾದ್‌ನಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2015 ರಲ್ಲಿ ಸಾಗರ್ ಎಂಬ ವ್ಯಕ್ತಿಯ ಕಿಡ್ನ್ಯಾಪ್ ಮತ್ತು ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬಳಾಗಿದ್ದಳು. 2018 ರಲ್ಲಿ ಜಾಮೀನು ಪಡೆದ ನಂತರ ಆಕೆ ನಾಪತ್ತೆಯಾಗಿದ್ದಳು. 2019ರಲ್ಲಿ ಆಕೆಯನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸಿತು ಅಂತಾ ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಗಾಜಿಯಾಬಾದ್‌ನ ಗೋವಿಂದಪುರಂನ ಕೆಫೆಯೊಂದರ ಬಳಿ ಅಪರಾಧಿ ನಿಧಿ ಬರುವುದರ ಬಗ್ಗೆ ನಮಗೆ ಸುಳಿವು ಸಿಕ್ಕಿತ್ತು. ಖಚಿತ ಮಾಹಿತಿ ಹಿನ್ನೆಲೆ ಆ ಕೆಫೆ ಬಳಿ ಪೊಲೀಸ್ ತಂಡ ಸುತ್ತುವರೆದಿತ್ತು. ಆಕೆ ಆಗಮಿಸುತ್ತಿದ್ದಂತೆ ನಮ್ಮ ತಂಡ ಬಂಧಿಸಿದೆ ಎಂದು ಉಪ ಪೊಲೀಸ್ ಆಯುಕ್ತ ಜಸ್ಮೀತ್ ಸಿಂಗ್ ಹೇಳಿದ್ದಾರೆ.
ಓದಿ: 'ಡಾಕ್ಟರ್ ಆಗಿ ಬರ್ತಿನಿ ಅಂದಿದ್ಯಲ್ಲೊ, ನಿನಗೆ ಸೆಲ್ಯೂಟ್ ಕಣೋ': ನವೀನ್ ತಾಯಿಯ ಅಳಲು
ಕೊಲೆಗೆ ಕಾರಣವೇನು?: ನಿಧಿಯ ಸಹೋದರಿ ಆರತಿಯೊಂದಿಗೆ ಸಾಗರ್ ಸ್ನೇಹ ಬೆಳೆಸಿಕೊಂಡಿದ್ದ. ಈ ವಿಷಯ ನಿಧಿ ಮತ್ತು ರಾಹುಲ್ಗೆ ತಿಳಿದಿದ್ದು, ಸಾಗರ್ಗೆ ಎಚ್ಚರಿಕೆ ನೀಡಿದ್ದರು. ಆಕೆಯ ಮದುವೆ ಬಳಿಕವೂ ಸಾಗರ್ ಆರತಿಯನ್ನು ಭೇಟಿಯಾಗುತ್ತಿದ್ದನು. ಇದರಿಂದ ಕೋಪಗೊಂಡ ರಾಹುಲ್ ಮತ್ತು ನಿಧಿ ದಂಪತಿ ಸಾಗರ್ನನ್ನು ಕೊಲ್ಲಲು ನಿರ್ಧರಿಸಿದ್ದರು.
ನಿಧಿ ಮತ್ತು ಆಕೆಯ ಪತಿ ರಾಹುಲ್ ಜಾತ್ ಸೇರಿದಂತೆ ಒಂಬತ್ತು ಜನರು ಸಾಗರ್ನ್ನು ಏಪ್ರಿಲ್ 1, 2015 ರಂದು ದೆಹಲಿಯ ಜಿಟಿಬಿ ಎನ್‌ಕ್ಲೇವ್ ಪ್ರದೇಶದಿಂದ ಅಪಹರಿಸಿ ಉತ್ತರ ಪ್ರದೇಶದ ಬಾಗ್‌ಪತ್‌ಗೆ ಕರೆದೊಯ್ದಿದ್ದರು. ಬಳಿಕ ಸಾಗರ್ನನ್ನು ಟ್ರಕ್ ಹರಿಸಿ ಕೊಂದಿದ್ದರು. ಈ ಕೊಲೆಯನ್ನು ಅಪಘಾತದಂತೆ ಬಿಂಬಿಸಲಾಗಿತ್ತು.
ತನಿಖೆ ಮೂಲಕ ಅದು ಕೊಲೆ ಎಂದು ಸಾಬೀತಾಗಿ ನಿಧಿ ಮತ್ತು ಆಕೆಯ ಪತಿ ರಾಹುಲ್ ಸೇರಿದಂತೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆದರೆ ನಿಧಿ ಜಾಮೀನು ಪಡೆದ ನಂತರ ನಾಪತ್ತೆಯಾಗಿದ್ದಳು. ಈಗ ಆ ಅಪರಾಧಿ ಮಹಿಳೆಯನ್ನು ಮತ್ತೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ ; ಕರ್ನಾಟಕ ಹಣ ಮಂಜೂರು ನಿರ್ಧಾರದ ವಿರುದ್ಧ ನಿರ್ಣಯ ಮಂಡನೆಗೆ ಸಿದ್ಧತೆ
ರಾಹುಲ್ ಕೂಡ ಜಾಮೀನಿನ ಮೇಲೆ ಹೊರಗಿದ್ದರು. ಆತ ಕುಖ್ಯಾತ ರೋಹಿತ್ ಚೌಧರಿ ಮತ್ತು ಅಂಕಿತ್ ಗುರ್ಜಾರ್ ಗ್ಯಾಂಗ್‌ನ ಭಾಗವಾಗಿದ್ದಾನೆ. ರಾಹುಲ್ ಕೊಲೆ, ಕೊಲೆ ಯತ್ನ ಮತ್ತು ಅಪಹರಣದ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಈ ಹಿಂದೆ ದೆಹಲಿಯಲ್ಲಿ ರಾಹುಲ್ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.