ಅಹಮದಾಬಾದ್(ಗುಜರಾತ್): 2008ರಲ್ಲಿ ಅಹಮದಾಬಾದ್ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 49 ದೋಷಿಗಳಲ್ಲಿ 38 ಮಂದಿಗೆ ಅಹಮದಾಬಾದ್ನ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿ, ಮಹತ್ವದ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಇನ್ನುಳಿದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಪರಾಧಿಗಳು ಅಹಮದಾಬಾದ್, ಭೋಪಾಲ್, ಗಯಾ, ಬೆಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿನ ಜೈಲುಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.
ಭಾರತೀಯ ನೀತಿ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ಪ್ರತಿ ಸೆಕ್ಷನ್ ಅಡಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ಘೋಷಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಜುಲೈ 26, 2008ರಂದು ಅಹಮದಾಬಾದ್ ನಗರದ ಹಲವೆಡೆ ಕೇವಲ 70 ನಿಮಿಷಗಳಲ್ಲಿ 20 ಬಾಂಬ್ಗಳನ್ನು ಸ್ಫೋಟಗೊಳಿಸಿ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕರು 56 ಜೀವಗಳನ್ನು ಬಲಿ ತೆಗೆದುಕೊಂಡಿದ್ದರು. 200ಕ್ಕೂ ಹೆಚ್ಚು ಮಂದಿ ಈ ದಾಳಿಯಲ್ಲಿ ಗಾಯಗೊಂಡಿದ್ದರು.
ಇದಾದ ನಂತರ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿತ್ತು. 2002ರ ಗೋಧ್ರಾ ಗಲಭೆಗೆ ಪ್ರತೀಕಾರವಾಗಿ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕರು ಈ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಪೊಲೀಸರು ತನಿಖೆ ನಡೆಸಿ ತಿಳಿಸಿದ್ದರು.
ಈ ಘಟನೆಯ ವಿಚಾರಣೆಗೆ ತ್ವರಿತ ಹಾಗೂ ವಿಶೇಷ ನ್ಯಾಯಾಲಯವನ್ನು ಸ್ಥಾಪನೆ ಮಾಡಲಾಗಿತ್ತು. ಫೆಬ್ರವರಿ 8, 2022ರಂದು 49 ಆರೋಪಿಗಳನ್ನು ದೋಷಿಗಳೆಂದು ವಿಶೇಷ ನ್ಯಾಯಾಲಯ ಘೋಷಣೆ ಮಾಡಿದ್ದು, ಈಗ 38 ಮಂದಿಗೆ ಮರಣದಂಡನೆ ಮತ್ತು 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.