ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಿರಾ ಕೊತ್ವಾಲಿ ವ್ಯಾಪ್ತಿಯ ಢಾಕಿಯಾ ಗ್ರಾಮದ ಶಾರದಾ ನದಿಯ ದಡದಲ್ಲಿ ಸಡಿಲವಾದ ಮಣ್ಣಿನ ರಾಶಿ ಕುಸಿದು ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರನ್ನು 12 ವರ್ಷದ ಪೂನಂ ದೇವಿ ಮತ್ತು 13 ವರ್ಷದ ಶಿವಾನಿ ಎಂದು ಗುರುತಿಸಲಾಗಿದೆ.
ಅವಶೇಷಗಳಡಿ ಸಮಾಧಿಯಾಗಿದ್ದ ಇತರ ಮೂವರು ಬಾಲಕಿಯರಾದ ನಿಕ್ಕಿ, ನಾಯ್ರಾ ಮತ್ತು ನೈನ್ಸಿ ಅವರನ್ನು ನಂತರ ಸ್ಥಳೀಯರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಭಿರಾ ಕೊತ್ವಾಲಿ ಉಸ್ತುವಾರಿ ವಿಮಲ್ ಕುಮಾರ್ ಗೌತಮ್ ಹೇಳಿದ್ದಾರೆ.
ಸ್ಥಳೀಯರ ಪ್ರಕಾರ, ಐವರು ಬಾಲಕಿಯರು ಮಣ್ಣು ಸಂಗ್ರಹಿಸಲು ಶಾರದಾ ನದಿಗೆ ತೆರಳಿದ್ದರು ಎಂದು ತಿಳಿಸಿದ್ದಾರೆ. ಶಾರದಾ ನದಿಯು ಗ್ರಾಮದ ಜನವಸತಿ ಪ್ರದೇಶದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಹರಿಯುತ್ತದೆ. ಈ ಎಲ್ಲ ಬಾಲಕಿಯರು ನದಿಯ ದಡದ ಬಳಿ ಒಂದು ಸ್ಥಳವನ್ನು ಆರಿಸಿಕೊಂಡು ಮಣ್ಣನ್ನು ಅಗೆಯಲು ಪ್ರಾರಂಭಿಸಿದಾಗ ಮಣ್ಣು ಕುಸಿದು ಈ ದುರ್ಘಟನೆ ನಡೆದಿದೆ.
ದಿಢೀರ್ ಮಣ್ಣು ಕುಸಿದಿದ್ದರಿಂದ ಇಬ್ಬರು ಬಾಲಕಿಯರು ಮಣ್ಣಿನ ಅಡಿ ಸಿಲುಕಿ ಮೃತಪಟ್ಟರೆ,ಬಾಲಕಿಯರ ಆಕ್ರಂದನ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಳಳೀಯರು ಮೂವರು ಬಾಲಕಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೂನಂ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ನಾಲ್ವರನ್ನು ಬಿಜುವಾದಲ್ಲಿನ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿತ್ತು.ಿ ಚಿಕಿತ್ಸೆ ವೇಳೆ ಶಿವಾನಿ ಕೂಡ ಅಸುನೀಗಿದಳು.
ಇದನ್ನು ಓದಿ: ಗುಜರಾತ್ ಸೇತುವೆ ದುರಂತ: ಮಡಿದವರ ಸಂಖ್ಯೆ 100ಕ್ಕೆ ಏರಿಕೆ: ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ..ಪಿಎಂ ರೋಡ್ ಶೋ ರದ್ದು