ಮಧುರೈ(ತಮಿಳುನಾಡು): ಇಲ್ಲಿನ ಆಳ್ವಾರ್ಕುರಿಚಿ ದೇವಸ್ಥಾನದಲ್ಲಿ 37 ವರ್ಷಗಳ ಹಿಂದೆ ಕಳ್ಳತವಾಗಿದ್ದ ಎರಡು ಪಂಚಲೋಹದ ದೇವರ ವಿಗ್ರಹಗಳು ಅಮೆರಿಕದ ವಸ್ತು ಸಂಗ್ರಹಾಲಯದಲ್ಲಿ ಪತ್ತೆಯಾಗಿವೆ. ದಾಖಲೆಗಳನ್ನು ಸಲ್ಲಿಸಿ ಇದೀಗ ಅವುಗಳನ್ನು ವಶಕ್ಕೆ ಪಡೆಯಲಾಗಿದ್ದು, ಬಳಿಕ ದೇವಸ್ಥಾನದ ಆಡಳಿತಕ್ಕೆ ನೀಡಲಾಗಿದೆ.
11 ನೇ ಶತಮಾನಕ್ಕೆ ಸೇರಿದ ಗಂಗಾನಾಥ, ಅಧಿಕಾರ ನಂದಿ ವಿಗ್ರಹಗಳನ್ನು ಪಂಚಲೋಹಗಳಿಂದ ನಿರ್ಮಿಸಲಾಗಿತ್ತು. ಆಳ್ವಾರ್ಕುರಿಚಿ ದೇವಸ್ಥಾನದಲ್ಲಿದ್ದ ಈ ವಿಗ್ರಹಗಳು 1985 ರಲ್ಲಿ ಕಳ್ಳತನವಾಗಿದ್ದವು. ಈ ಬಗ್ಗೆ ಪ್ರಕರಣವೂ ದಾಖಲಾಗಿತ್ತು. ಇಷ್ಟು ವರ್ಷಗಳಿಂದ ನಾಪತ್ತೆಯಾಗಿದ್ದ ಈ ವಿಗ್ರಹಗಳು ಇದೀಗ ಅಮೆರಿಕದ ನ್ಯೂಯಾರ್ಕ್ ಸಿಟಿ ಮ್ಯೂಸಿಯಂನಲ್ಲಿ ಪತ್ತೆಯಾಗಿದ್ದು, ದಾಖಲೆಗಳ ಸಮೇತ ಅವುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಮೂರ್ತಿ ಕಳ್ಳಸಾಗಣೆ ತಡೆ ಘಟಕದ ಡಿಜಿಪಿ ಜಯಂತ್ ಮುರಳಿ ಹಾಗೂ ಐಜಿ ದಿನಕರನ್ ಅವರು ವಿಗ್ರಹಳನ್ನು ಮರು ಪಡೆಯಲಾಗಿದೆ. 1985 ರಲ್ಲಿ ವಿಗ್ರಹಗಳು ನಾಪತ್ತೆಯಾಗಿದ್ದವು. 1986 ರಲ್ಲಿ ಈ ಬಗ್ಗೆ ದಾಖಲಾದ ದೂರನ್ನು ಮುಚ್ಚಿ ಹಾಕಲಾಗಿತ್ತು. ಈ ಎರಡು ವಿಗ್ರಹಗಳ ಮೌಲ್ಯ ಹಲವು ಕೋಟಿ ರೂಪಾಯಿಗಳಾಗಿವೆ ಎಂದು ತಿಳಿಸಿದರು.
ವಿಗ್ರಹಗಳನ್ನು ಯಾರು ಕಳವು ಮಾಡಿದರು. ಎಷ್ಟು ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈವರೆಗೆ ವಿದೇಶಗಳಿಂದ 22 ಪ್ರತಿಮೆಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಇದೇ ವರ್ಷ 10 ಮೂರ್ತಿಗಳನ್ನು ವಾಪಸ್ ತರಲಾಗಿದೆ. ಹೆಚ್ಚಿನ ಪ್ರತಿಮೆಗಳನ್ನು ಅಮೆರಿಕ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು. ಇನ್ನೂ 40ಕ್ಕೂ ಹೆಚ್ಚು ಪ್ರತಿಮೆಗಳು ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.