ನವದೆಹಲಿ: 2011ರಿಂದ ಸರಿಸುಮಾರು 16 ಲಕ್ಷ ಭಾರತೀಯರು ತಮ್ಮ ಪೌರತ್ವವನ್ನು ತೊರೆದಿದ್ದಾರೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ರಾಜ್ಯಸಭೆಗೆ ತಿಳಿಸಿದ್ದಾರೆ. ಇದರಲ್ಲಿ ಕಳೆದ ವರ್ಷ ಅಧಿಕ ಸಂಖ್ಯೆಯಲ್ಲಿ 2,25,620 ಲಕ್ಷ ಮಂದಿ ಪೌರತ್ವ ತ್ಯಜಿಸಿದ್ದಾರೆ. 2020ರಲ್ಲಿ ಕಡಿಮೆ ಪ್ರಮಾಣದಲ್ಲಿ ಅಂದರೆ 85, 256 ಮಂದಿ ಪೌರತ್ವ ತೊರೆದಿದ್ದಾರೆ ಎಂದು ವಿವರ ನೀಡಿದರು.
ವಿದೇಶಾಂಗ ಸಚಿವರು ಪೌರತ್ವ ತೊರೆದ ವರ್ಷವಾರು ಅಂಕಿಅಂಶವನ್ನು ರಾಜ್ಯಸಭೆಗೆ ನೀಡಿದ್ದಾರೆ. 2015ರಲ್ಲಿ 1,31,489 ಮಂದಿ, 2016ರಲ್ಲಿ 1,41,603, 2017ರಲ್ಲಿ 1,33,049 ಮಂದಿ ಭಾರತೀಯ ಪೌರತ್ವ ತೊರೆದಿದ್ದಾರೆ. 2018ರಲ್ಲಿ 2,25,629 ಮಂದಿ, 2011ರಲ್ಲಿ 1,22,819 ಮಂದಿ, 2012ರಲ್ಲಿ 1,20,923 ಮಂದಿ 2013ರಲ್ಲಿ 1,31,405 ಮಂದಿ 2014ರಲ್ಲಿ 1,29,328 ಮಂದಿ ಭಾರತೀಯ ಪೌರತ್ವ ತ್ಯಜಿಸಿದ್ದಾರೆ. ಇದುವರೆಗೆ ಅಂದರೆ, 2011ರಿಂದ ಇಲ್ಲಿಯವರೆಗೆ 16,63,440 ಮಂದಿ ಪೌರತ್ವ ವಾಪಸ್ ಮಾಡಿದ್ದಾರೆ ಎಂದು ತಿಳಿಸಿದರು.
ಉದ್ಯೋಗಿಗಳ ವಜಾ ಅರಿವಿದೆ: ಇದೇ ವೇಳೆ ಅಮೆರಿಕ ಕಂಪನಿಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ಉದ್ಯೋಗ ವಜಾದ ಬಗ್ಗೆ ಕೂಡ ಅರಿವಿದೆ ಎಂದು ಸಚಿವರು ತಿಳಿಸಿದ್ದಾರೆ. ಅಮೆರಿಕದಲ್ಲಿರುವ ಕೆಲವು ಭಾರತೀಯರು ಎಚ್-1ಬಿ ಮತ್ತು ಎಲ್1 ವೀಸಾ ಹೊಂದಿದ್ದಾರೆ. ಭಾರತದ ಐಟಿ ಉದ್ಯೋಗಿಗಳು ಸೇರಿದಂತೆ ಕೌಶಲ್ಯಾಧರಿತ ನೌಕರರ ಕಾಳಜಿ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರದೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಕೈಗಾರಿಕಾ ಸಂಘಟನೆ ಮತ್ತು ಈ ವಿಚಾರದಲ್ಲಿನ ವಾಣಿಜ್ಯ ಚೇಂಬರ್ ಸೇರಿದಂತೆ ಸ್ಟೋಕ್ ಹೋಲ್ಡರ್ ಜೊತೆಗೆ ನಾವು ಕಾರ್ಯನಿರತರಾಗಿದ್ದೇವೆ ಎಂದು ಹೇಳಿದರು.
ಯುಎಇ ಪೌರತ್ವ ಪಡೆದ ಐವರು: ಕಳೆದ ಮೂರು ವರ್ಷಗಳಲ್ಲಿ 135 ರಾಷ್ಟ್ರಗಳು ಭಾರತೀಯರಿಗೆ ಅಲ್ಲಿನ ಪೌರತ್ವ ನೀಡಿವೆ ಎಂಬ ಮಾಹಿತಿಯನ್ನು ಅವರು ಸದನಕ್ಕೆ ಒದಗಿಸಿದರು. ಇದೇ ವೇಳೆ ಯಾವ ದೇಶಗಳಲ್ಲಿ ಅಥವಾ ಯಾವ ನಿರ್ದಿಷ್ಟ ಸಮಯದಲ್ಲಿ ಭಾರತೀಯ ನಾಗರೀಕರಿಗೆ ಅಲ್ಲಿನ ಪೌರತ್ವ ನೀಡಲಾಗಿದೆ ಎಂಬುದರ ಕುರಿತ ವಿವರಣೆ ನೀಡಿಲ್ಲ. ಕಳೆದ ಮೂರು ವರ್ಷದಲ್ಲಿ ಐವರು ಭಾರತೀಯರು ಯುನೈಟೆಡ್ ಅರಬ್ ಎಮಿರೇಟ್ಸ್ ಪೌರತ್ವ ಪಡೆದಿದ್ದಾರೆ ಎಂದು ತಿಳಿಸಿದರು.
ಉದ್ಯೋಗ ಇನ್ನಿತರ ಕಾರಣ: ವಿದೇಶಾಂಗ ಸಚಿವ(ರಾಜ್ಯ ಖಾತೆ) ವಿ.ಮುರಳೀಧರನ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ವಿದೇಶದಲ್ಲಿ ಉದ್ಯಮಿಗಳು ಮತ್ತು ವೃತ್ತಿಪರರು ನೆಲೆ ಕಂಡುಕೊಂಡಿರುವ ಮಾಹಿತಿ ಇಲ್ಲ ಎಂದು ತಿಳಿಸಿದರು. ಭಾರತೀಯ ನಾಗರೀಕರು ಪ್ರವಾಸ ಅಥವಾ ಉದ್ಯೋಗ ಸಂಬಂಧ ವಿದೇಶಕ್ಕೆ ಪ್ರಯಾಣ ಬೆಳೆಸುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ಉದ್ಯೋಗ ಮತ್ತು ಇತರೆ ಕಾರಣದಿಂದ ಕೆಲವರು ವಿದೇಶಗಳಿಗೆ ಹೋಗುತ್ತಾರೆ. ಬಳಿಕ ಅವರು ಅಲ್ಲಿಯೇ ನೆಲೆಯೂರುವುದು ಕೂಡ ಪೌರತ್ವ ತ್ಯಜಿಸಲು ಕಾರಣವಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಮುಂಬೈನಲ್ಲಿ ಎರಡು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ