ಆಲಪ್ಪುಳ (ಕೇರಳ): ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ 24 ವರ್ಷದ ವಿವಾಹಿತ ಮಹಿಳೆ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ ಇಂದು ಮತ್ತೋರ್ವ ವಿವಾಹಿತೆ ಗಂಡನ ಮನೆಯಲ್ಲಿ ಸಾವಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಮಾತ್ರ ಇಲ್ಲಿಯವರೆಗೆ ಲಭ್ಯವಾಗಿಲ್ಲ.
19 ವರ್ಷದ ವಿವಾಹಿತ ಮಹಿಳೆ ಸುಚಿತ್ರಾ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು ಬೆಳಗ್ಗೆ ಗಂಡ ವಿಷ್ಣುವಿನ ನಿವಾಸದಲ್ಲಿ ಈಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ವೇಳೆ ವಿಷ್ಣುವಿನ ತಾಯಿ ಮಾತ್ರ ಮನೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆ ಉಪಹಾರ ಸೇವನೆ ಮಾಡಿ ರೂಂನೊಳಗೆ ಹೋಗಿರುವ ಸುಚಿತ್ರಾ ತುಂಬಾ ಹೊತ್ತಾದರೂ ಹೊರಗಡೆ ಬಂದಿಲ್ಲ. ಈ ವೇಳೆ ವಿಷ್ಣುವಿನ ತಾಯಿ ಪಕ್ಕದ ಮನೆಯವರಿಗೆ ಸುದ್ದಿ ತಿಳಿಸಿದ್ದು, ಅಲ್ಲಿಗೆ ಆಗಮಿಸಿ ಡೋರ್ ತೆರೆದು ನೋಡಿದಾಗ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಮಾರ್ಚ್ 21ರಂದು ವಿಷ್ಣು ಹಾಗೂ ಸುಚಿತ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗಾಗಲೇ ಗಂಡನ ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.
ನಿನ್ನೆ ಕೇರಳದ ಕೊಲ್ಲಂನಲ್ಲಿ 24 ವರ್ಷದ ವಿಸ್ಮಯ ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗಾಗಲೇ ಗಂಡನ ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.