ಹೈದರಾಬಾದ್(ತೆಲಂಗಾಣ): ಚಿಕ್ಕ ಮಕ್ಕಳು ತಪ್ಪು ಮಾಡಿದರೆ ಕಿವಿ ಹಿಂಡಿ ಬುದ್ಧಿ ಹೇಳಬೇಕು. ಅದೂ ಬೇಡ ಎಂದರೆ ಒಂದೇಟು ಹೊಡೆದರೂ ಸರಿಯೇ. ಆದರೆ, ಅದೆಲ್ಲಕ್ಕೂ ಮೀರಿ ಅಮಾನವೀಯವಾಗಿ ನಡೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆ ಉದಾರಣೆ ಎಂಬಂತೆ ಇಲ್ಲೊಂದು ಪೈಶಾಚಿಕ ಘಟನೆ ಜರುಗಿದೆ. ಮಕ್ಕಳ ಸಂಪೂರ್ಣ ಬಟ್ಟೆ ಬಿಚ್ಚಿಸಿ ಬೆತ್ತಲು ಮಾಡಿ ಮನಬಂದಂತೆ ಥಳಿಸಲಾಗಿದೆ. ಈ ಘಟನೆ ಕಳೆದ ತಿಂಗಳು ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೈದರಾಬಾದ್ನ ಮಂಗಲ್‌ಹಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ತಿಂಗಳು 29 ರಂದು ನಡೆದ ಈ ಭಯಾನಕ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಪೋಕರ್ ಆಡುತ್ತಿದ್ದಾರೆಂದು ಆರೋಪಿಸಿ ಬಾಲಕರನ್ನು ವಿವಸ್ತ್ರಗೊಳಿಸಿ ಮನಬಂದಂತೆ ಹಲ್ಲೆ ನಡೆಸಲಾಗಿದೆ. ವಿಡಿಯೋ ವೈರಲ್ ಆಗಿದ್ದು, ಇದು ಪೊಲೀಸರ ಗಮನಕ್ಕೂ ಬಂದಿದೆ.
ವಿವರ: ಕಳೆದ ಶುಕ್ರವಾರ 16 ಮಕ್ಕಳು ಧೂಲ್‌ಪೇಟ್ ಪ್ರದೇಶದ ಬೆಟ್ಟದ ಮೇಲೆ ಪೋಕರ್ ಆಡುತ್ತಿದ್ದರು. ಇದನ್ನು ಗಮನಿಸಿದ ಮೂವರು ಯುವಕರು ಮಕ್ಕಳನ್ನು ವಿವಸ್ತ್ರಗೊಳಿಸಿ ಬರ್ಬರವಾಗಿ ಥಳಿಸಿದ್ದಾರೆ. ಮೂವರಲ್ಲಿದ್ದ ಮತ್ತೊಬ್ಬ ಯುವಕ ತನ್ನ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿರುವುದನ್ನು ತಿಳಿದ ಮಕ್ಕಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ನೋಟಿಸ್ ಕಳುಹಿಸಿದ್ದಾರೆ.
ಈ ಮಕ್ಕಳನ್ನು ಬಿಜೆಪಿ ಕಾರ್ಯಕರ್ತರು ಥಳಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗುತ್ತಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಆರೋಪಿಗಳಿಗೂ ಬಿಜೆಪಿ ನಾಯಕರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಬೈಲಹೊಂಗಲ ಬಸವೇಶ್ವರ ಜಾತ್ರೆಯಲ್ಲಿ ಶೋಕಿಗಾಗಿ ಗಾಳಿಯಲ್ಲಿ ಗುಂಡು!