ಜಲಗಾಂವ್: ಬಾಳೆ ಹಣ್ಣುಗಳನ್ನು ಸಾಗಿಸುತ್ತಿದ್ದ ಟ್ರಕ್ವೊಂದು ಪಲ್ಟಿಯಾಗಿ 15 ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಯಾವಲ್ ತಾಲೂಕಿನ ಕಿಂಗಾಂವ್ ಬಳಿ ನಡೆದಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿಯ ಪ್ರಕಾರ, ಧುಲೆ ಜಿಲ್ಲೆಯ ನೆರ್ನಿಂದ ಟ್ರಕ್ವೊಂದು ಬಾಳೆಹಣ್ಣುಗಳನ್ನು ತುಂಬಿಕೊಂಡು ರಾವರ್ಗೆ ಬರುತ್ತಿತ್ತು. ಈ ಟ್ರಕ್ ಜೊತೆ 21 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಕಿಂಗಾಂವ್ ಬಳಿ ಬರುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಟ್ರಕ್ ಪಲ್ಟಿಯಾಗಿದೆ.
ಟ್ರಕ್ ಪಲ್ಟಿಯಾಗಿರುವುದರಿಂದ 15 ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿದ್ದಾಎ. ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಸ್ಥಳೀಯರೊಂದಿಗೆ ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು.
ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರು ಅಭೂಡಾ, ಕೇರಳ ಮತ್ತು ರಾವರ್ ತಾಲೂಕಿನವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪರಿಹಾರ ಘೋಷಣೆ
ಅಪಘಾತದಲ್ಲಿ ಸಾವನ್ನಪ್ಪಿರುವ ವ್ಯಕ್ತಿಗಳಿಗೆ ಪರಿಹಾರ ಘೋಷಣೆ ಮಾಡಲಾಗಿದ್ದು, 2 ಲಕ್ಷ ರೂ. ನೀಡುವುದಾಗಿ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ಹೊರಡಿಸಿದೆ. ಘಟನೆ ಬಗ್ಗೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿ ವ್ಯಕ್ತಿಗೆ 2 ಲಕ್ಷ ರೂ. ಮೃತ ಕುಟುಂಬಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.