ಗಾಂಧಿನಗರ(ಗುಜರಾತ್): ರಣಭೀಕರ ಮಳೆಗೆ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ಸಂಪೂರ್ಣ ತತ್ತರಿಸಿ ಹೋಗಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ - ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಜೊತೆಗೆ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಗುಜರಾತ್ನಲ್ಲಿ ಮಳೆಯಾಗುತ್ತಿರುವ ಕಾರಣ ಅನೇಕ ನದಿ, ಕಾಲುವೆ ಉಕ್ಕಿ ಹರಿಯುತ್ತಿದ್ದು, ನದಿ ತಟದ ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಂಡು, 40 ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಹೀಗಾಗಿ, ಅನೇಕರ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ ನಾಳೆ, ನಾಡಿದ್ದು ಶಾಲಾ-ಕಾಲೇಜ್ಗಳಿಗೆ ರಜೆ ಘೋಷಿಸಲಾಗಿದೆ.
14 ಜನರ ಸಾವು: ಭೀಕರ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 9 ಜನರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ 575 ಜನರ ರಕ್ಷಣೆ ಮಾಡಲಾಗಿದೆ. 31,035 ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮುಖ್ಯವಾಗಿ ಜುನಾಗಢ್, ಸೋಮನಾಥ್, ಡ್ಯಾಂಗ್, ನವಸಾರಿ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿರಿ: ಪಾಕ್ ಪತ್ರಕರ್ತನಿಗೆ ಆಹ್ವಾನ, ಭೇಟಿ ಆರೋಪ ಅಲ್ಲಗಳೆದ ಹಮೀದ್ ಅನ್ಸಾರಿ
ರಾಜ್ಯದಲ್ಲಿ 83 ಜನರು, 481 ಪ್ರಾಣಿ ಸಾವು: ರಾಜ್ಯದಲ್ಲಿ ಮಳೆ ಬೀಳಲು ಶುರುವಾದಾಗಿನಿಂದಲೂ ಒಟ್ಟು 83 ಜನರು ಸಾವನ್ನಪ್ಪಿದ್ದು, 481 ಪ್ರಾಣಿಗಳು ತಮ್ಮ ಪ್ರಾಣ ಕಳೆದುಕೊಂಡಿವೆ. ಇದರ ಜೊತೆಗೆ 101 ಮನೆಗಳು ಹಾನಿಯಾಗಿವೆ. ಇನ್ನೂ ಮಹಾರಾಷ್ಟ್ರ, ಕರ್ನಾಟಕದಲ್ಲೂ ಮಳೆಯಾರ್ಭಟ ಜೋರಾಗಿದ್ದು, ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿವೆ.