ಸೂರತ್ (ಗುಜರಾತ್): ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಆಗಿರುವ ದ್ರೌಪದಿ ಮುರ್ಮು ಕುರಿತು ಗುಜರಾತ್ನ ಸೂರತ್ ಮೂಲದ 13 ವರ್ಷದ ಬಾಲಕಿ ಪುಸ್ತಕ ಬರೆದು, ಅದನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅಲ್ಲದೇ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಟ್ಯಾಗ್ ಮಾಡಿ, ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಅವರಿಗೆ ಬೆಂಬಲ ನೀಡುವಂತೆ ಬಾಲಕಿ ಕೋರಿದ್ದಾರೆ.
ಭಾವಿಕಾ ಮಹೇಶ್ವರಿ ಎಂಬ ಬಾಲಕಿಯೇ ಮುರ್ಮು ಕುರಿತ ಪರಿಚಯ ಪುಸ್ತಕ ಬರೆದು ಗಮನ ಸೆಳೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾವಿಕಾ, ಇತ್ತೀಚೆಗೆ ದೆಹಲಿಯ ರಾಷ್ಟ್ರಪತಿ ಭವನಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿದ್ದೆ. ಆಗ ದ್ರೌಪದಿ ಮುರ್ಮು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಗ್ಗೆ ತಂದೆ ತಿಳಿಸಿದರು. ಅಲ್ಲದೇ, ಮುರ್ಮು ಚುನಾಯಿತರಾದರೆ ಬುಡಕಟ್ಟು ಸಮುದಾಯದಿಂದ ಆಯ್ಕೆಯಾದ ಮೊದಲ ರಾಷ್ಟ್ರಪತಿಯಾಗಲಿದ್ದಾರೆ ಎಂದು ತಂದೆ ಹೇಳಿದರು. ಇದುವೇ ನನಗೆ ಪುಸ್ತಕ ಬರೆಯಲು ಪ್ರೇರಣೆ ನೀಡಿತು ಎಂದು ತಿಳಿಸಿದರು.
ಅಲ್ಲದೇ, ಮುರ್ಮು ಕುರಿತ ಪುಸ್ತಕಗಳನ್ನು ದೆಹಲಿಯ ಮಾರುಕಟ್ಟೆ ಮತ್ತು ಅಂತರ್ಜಾಲದಲ್ಲಿ ಹುಡುಕಿದಾಗ ಎಲ್ಲೂ ಸಿಗಲಿಲ್ಲ. ಹೀಗಾಗಿ ಮುರ್ಮು ಜೀವನ ಮತ್ತು ಹೋರಾಟಗಳ ಮೇಲೆ ಬೆಳಕು ಚೆಲ್ಲುವಂತಹ ಯಾವ ಪುಸ್ತಕಗಳು ಲಭ್ಯವಿಲ್ಲ ಎಂಬುದು ಕೂಡ ನನಗೆ ಅರಿವಿಗೆ ಬಂತು. ಅಂತೆಯೇ, ಮುರ್ಮು ಬಗ್ಗೆ ಬರೆಯಲು ಆರಂಭಿಸಿದೆ. ಈ ಪುಸ್ತಕದಿಂದ ಮುರ್ಮು ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ಭಾವಿಕಾ ಅಭಿಪ್ರಾಯಪಟ್ಟಿದ್ದಾರೆ.
ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದ ಮಹಿಳೆ ರಾಷ್ಟ್ರಪತಿ ಅಭ್ಯರ್ಥಿಯಾಗುವುದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸೌಂದರ್ಯ. ಅವರು ಅವಿರೋಧವಾಗಿ ಆಯ್ಕೆಯಾದರೆ ಜಗತ್ತಿಗೆ ಸಕಾರಾತ್ಮಕ ಸಂದೇಶ ರವಾನಿಸಿದಂತೆ ಆಗಲಿದೆ. ಜೊತೆಗೆ ಮಹಿಳಾ ಸಬಲೀಕರಣಕ್ಕೆ ದೊಡ್ಡ ಉತ್ತೇಜನ ನೀಡಿದಂತೆಯೂ ಆಗಲಿದೆ ಎಂದು ಬಾಲಕಿ ತನ್ನ ಆಶಯ ಹೊರಹಾಕಿದ್ದಾರೆ.
ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷದ ಅಭ್ಯರ್ಥಿಯಾಗಿ ಕನ್ನಡತಿ ಮಾರ್ಗರೇಟ್ ಆಳ್ವಾ ಆಯ್ಕೆ