ಪಾಟ್ನಾ: ಬಿಹಾರದಾದ್ಯಂತ ನಿನ್ನೆ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದು, ಅನೇಕ ಜಾನುವಾರುಗಳು ಸಹ ಸಾವನ್ನಪ್ಪಿವೆ.
ಭಾಗಲ್ಪುರ್ ಜಿಲ್ಲೆಯಲ್ಲಿ ಜಾನುವಾರುಗಳನ್ನು ಮೇಯಿಸಲು ಹೋದ ನಾಲ್ವರು ಮಳೆಯಿಂದ ತಪ್ಪಿಸಿಕೊಳ್ಳಲು ಮರದಡಿ ನಿಂತಿದ್ದಾರೆ. ಈ ವೇಳೆ ಸಿಡಿಲು ಹೊಡೆದಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: 5 ತಿಂಗಳ ಮಗು ಸೇರಿ ನಾಲ್ವರು ಸಾವು
ಸುಪೌಲ್ ಜಿಲ್ಲೆ ಹಾಗೂ ಸಮಸ್ತಿಪುರ ಜಿಲ್ಲೆಯಲ್ಲಿ ತಲಾ ಒಬ್ಬರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾರೆ. ಜಮುಯಿ ಜಿಲ್ಲೆಯಲ್ಲಿ ಓರ್ವ ಯುವಕ ಹಾಗೂ ಮಹಿಳೆ ಸಾವನ್ನಪ್ಪಿದ್ದಾರೆ. ಬಂಕಾದಲ್ಲಿ ಈದ್ ಹಬ್ಬದ ಪ್ರಯುಕ್ತ ಮಗಳ ಮನೆಗೆ ಸಿಹಿ ನೀಡಲು ಹೋಗುತ್ತಿದ್ದ ವ್ಯಕ್ತಿ, ಮುಂಗರ್‌ನಲ್ಲಿ ಮಗು ಸೇರಿದಂತೆ ಮೂವರ ದುರ್ಮರಣವಾಗಿದೆ.
ಹೀಗೆ ವಿವಿಧ ಜಿಲ್ಲೆಗಳಿಂದ ಒಟ್ಟು 13 ಮಂದಿ ಬುಧವಾರ ಒಂದೇ ದಿನ ಸಿಡಿಲಿಗೆ ತುತ್ತಾಗಿದ್ದಾರೆ. ಗುಡುಗು ಸಹಿತ ಮಳೆಯಿಂದಾಗಿ ತೋಟ-ಗದ್ದೆಗಳ ಬೆಳೆಗಳು ನಾಶವಾಗಿವೆ.