ರೋಹ್ತಾಸ್ (ಬಿಹಾರ): ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿಂದು ಭಾರಿ ದುರಂತ ಸಂಭವಿಸಿತು. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಸೇತುವೆಯ ಪಿಲ್ಲರ್ಗಳ ಮಧ್ಯೆ ಸಿಲುಕಿದ್ದ. ಸುಮಾರು 24 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿ ಆತನನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿತ್ತು. ಆದರೆ, ಕುಟುಂಬಸ್ಥರ ಪ್ರಾರ್ಥನೆ ಫಲಿಸಲಿಲ್ಲ. ರಕ್ಷಣಾ ಸಿಬ್ಬಂದಿಯ ಶ್ರಮವೂ ವ್ಯರ್ಥವಾಯಿತು. ಏಕೆಂದರೆ, ಆಸ್ಪತ್ರೆಯಲ್ಲಿ ಬಾಲಕ ಪ್ರಾಣ ಬಿಟ್ಟಿದ್ದಾನೆ.
ಮೃತಪಟ್ಟ ಬಾಲಕನನ್ನು ರಂಜನ್ ಕುಮಾರ್ (12) ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ. ಅಂದಿನಿಂದ ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇದೇ ವೇಳೆ ಇಲ್ಲಿನ ನಸ್ರಿಗಂಜ್-ದೌದ್‌ನಗರ ಸೇತುವೆ ಬಳಿ ಹಸು ಮೇಯಿಸಲು ತೆರಳಿದ್ದ ಕೆಲವರು ಬಾಲಕನ ಕೂಗುವ ಶಬ್ಧ ಕೇಳಿದ್ದಾರೆ. (12 year old boy stuck in pillar) ಆಗ ನೋಡಿದಾಗ ಸೇತುವೆಯ ಎರಡು ಪಿಲ್ಲರ್ ನಡುವೆ ಬಾಲಕ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಇದರಿಂದ ಸ್ಥಳೀಯ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ನಂತರ ಬಾಲಕನ ಮಾಹಿತಿ ಕಲೆ ಹಾಕಿ ಕುಟುಂಬಸ್ಥರಿಗೂ ತಕ್ಷಣ ತಿಳಿಸಲಾಗಿದೆ.
ಎಸ್‌ಡಿಆರ್‌ಎಫ್ - ಎನ್‌ಡಿಆರ್‌ಎಫ್ ಜಂಟಿ ಕಾರ್ಯಾಚರಣೆ: ಬಾಲಕ ಕಂಬಗಳ ಮಧ್ಯೆ ಸಿಲುಕಿರುವ ಮಾಹಿತಿ ಪಡೆದ ತಕ್ಷಣ ಪೊಲೀಸರು ಹಾಗೂ ಕುಟುಂಬಸ್ಥರು ಸೇರಿ ಎಲ್ಲರೂ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಸಹ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಆಡಳಿತದ ಸಿಬ್ಬಂದಿ ಜಂಟಿಯಾಗಿ ಬಾಲಕನ ರಕ್ಷಣೆಗೆ ಶ್ರಮಿಸಿದ್ದಾರೆ. ಆದರೆ, ಪಿಲ್ಲರ್ಗಳ ಸಂದುಗಳಲ್ಲಿ ಬಾಲಕ ಸಿಲುಕಿದ್ದರಿಂದ ಗಂಟೆಗಳ ರಕ್ಷಣಾ ಕಾರ್ಯ ಕೈಗೊಂಡರೂ ಹೊರತೆಗೆಯಲು ಹರಸಾಹಸ ಪಡುವಂತಾಯಿತು.
ಅಲ್ಲದೇ, ರಕ್ಷಣೆ ಮಾಡಲು ಸೇತುವೆಯ ಮೇಲೆ ಸಾಕಷ್ಟು ಜಾಗವೂ ಇರಲಿಲ್ಲ. ಹೀಗಾಗಿ ಕೆಳಗಿನಿಂದ ಪಿಲ್ಲರ್ ಹಾಗೂ ತಡೆಗೋಡೆಯನ್ನು ಒಡೆಯಲು ನಿರ್ಧರಿಸಲಾಗಿತ್ತು. ಅಂತೆಯೇ, ಜೆಸಿಬಿ ಸಹಾಯದಿಂದ ರಸ್ತೆಯ ಸ್ಲ್ಯಾಬ್ ಹಾಗೂ ಗೋಡೆ ಒಡೆದು ಇನ್ನೊಂದು ಬದಿಯಿಂದ ಬಾಲಕನಿಗೆ ಆಮ್ಲಜನಕ ಪೂರೈಸುವ ಕೆಲಸ ಮಾಡಿದ್ದಾರೆ. ಹೀಗೆ ಹಲವಾರು ಗಂಟೆಗಳು ಕಾರ್ಯಾಚರಣೆ ನಡೆಸಿ ಕೊನೆಗೂ ಬಾಲಕನನ್ನು ಯಶಸ್ವಿಯಾಗಿ ಹೊರತೆಗೆಯಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಂಜನ್ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಆದಾಗಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕ ಮಾನಸಿಕ ಅಸ್ವಸ್ಥನಾಗಿದ್ದ- ತಂದೆ: ಎಸ್‌ಡಿಎಂ ಉಪೇಂದ್ರ ಪಾಲ್ ಮಾತನಾಡಿ, ಬಾಲಕ ರಂಜನ್ ಕುಮಾರ್ನನ್ನು ಪಿಲ್ಲರ್ ಸಂದುಗಳಿಂದ ಹೊರ ತೆಗೆದ ತಕ್ಷಣ ರಕ್ಷಣಾ ತಂಡ ಆಂಬ್ಯುಲೆನ್ಸ್ ಮೂಲಕ ಸಸರಾಮ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ವೇಳೆ ಕುಟುಂಬಸ್ಥರು ಕೂಡ ಜೊತೆಗಿದ್ದರು. ಆದರೆ, ರಂಜನ್ ಆರೋಗ್ಯ ಸ್ಥಿತಿ ತೀರ ಗಂಭೀರವಾಗಿತ್ತು ಎಂದು ಹೇಳಿದ್ದಾರೆ. ಮತ್ತೊಂದೆಡೆ, ಬಾಲಕ ರಂಜನ್ ಮಾನಸಿಕ ಅಸ್ವಸ್ಥನಾಗಿದ್ದ ಎಂದು ತಂದೆ ಭೋಲಾ ಶಾ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಮನೆಯಿಂದ ನಾಪತ್ತೆಯಾಗಿದೆ. ಪಾರಿವಾಳವನ್ನು ಹಿಡಿಯಲು ಸೇತುವೆ ಬಳಿಗೆ ಹೋಗಿರಬೇಕು. ಪಾರಿವಾಳ ಹಿಡಿಯುವಾಗ ಕಾಲು ಜಾರಿ ಎರಡು ಕಂಬಗಳ ಮಧ್ಯೆ ಸಿಕ್ಕಿಹಾಕಿಕೊಂಡಿರಬೇಕು ಎಂದು ಅವರು ಶಂಕಿಸಿದ್ದಾರೆ.
ಇದನ್ನೂ ಓದಿ: ಸಿಧಿಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಮಕ್ಕಳು ಸೇರಿ 7 ಮಂದಿ ಸ್ಥಳದಲ್ಲೇ ಸಾವು