ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 11,451 ಹೊಸ ಕೋವಿಡ್-19 (COVID-19) ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 3,43,66,987 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸದ್ಯಕ್ಕೆ ಭಾರತದಲ್ಲಿ 1,42,826 ಸಕ್ರಿಯ ಪ್ರಕರಣಗಳಿದ್ದು, ಕಳೆದ 262 ದಿನಗಳಿಗೆ ಹೋಲಿಸಿದ್ರೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ನಿನ್ನೆ 13,204 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿ ಚೇತರಿಕೆ ಪ್ರಮಾಣ 98.24% ಇದೆ.
ಮಹಾಮಾರಿ ಸೋಂಕಿಗೆ ನಿನ್ನೆ 266 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 4,61,057ಕ್ಕೆ ಏರಿಕೆಯಾಗಿದೆ. ಜೊತೆಗೆ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನ ನಿರಂತರವಾಗಿ ನಡೆಯುತ್ತಿದ್ದು, ಈವರೆಗೆ ಒಟ್ಟು 108.47 ಕೋಟಿ ಕೋವಿಡ್ ಲಸಿಕಾ ಡೋಸ್ ನೀಡಲಾಗಿದೆ. ಜೊತೆಗೆ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8.7 ಲಕ್ಷಕ್ಕೂ ಅಧಿಕ ಮಂದಿಗೆ COVID-19 ಪರೀಕ್ಷೆ ನಡೆಸಲಾಗಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 7,124 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರದಲ್ಲಿ 892 ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ.