ಡೆಹ್ರಾಡೂನ್, ಉತ್ತರಾಖಂಡ: ನೂತನ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರ ಸಂಪುಟಕ್ಕೆ ಶುಕ್ರವಾರ 11 ಸಚಿವರು ಸೇರ್ಪಡೆಯಾಗಿದ್ದಾರೆ. ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ನೂತನ ಸಚಿವರಿಗೆ ರಾಜಭವನದಲ್ಲಿ ಪ್ರಮಾಣ ವಚನ ಬೋಧಿಸಿದ್ದಾರೆ.
ಉತ್ತರಾಖಂಡ ಬಿಜೆಪಿ ಅಧ್ಯಕ್ಷರಾಗಿದ್ದ ಬಸೀಂದರ್ ಭಗತ್ ಅವರು ತಿರಥ್ ಸಿಂಗ್ ರಾವತ್ ಸಂಪುಟದಲ್ಲಿ ಸಚಿವರಾಗಿ ನೇಮಕಗೊಂಡಿದ್ದಾರೆ. ಈಗ ಉತ್ತರಾಖಂಡ ಬಿಜೆಪಿ ಮುಖ್ಯಸ್ಥರಾಗಿ ಮದನ್ ಕೌಶಿಕ್ ನೇಮಕಗೊಂಡಿದ್ದಾರೆ.
ಸತ್ಪಾಲ್ ಮಹಾರಾಜ್, ಹರಕ್ ಸಿಂಗ್ ರಾವತ್, ಬಿಷನ್ ಸಿಂಗ್ ಚೌಪಾಲ್, ಯಶಪಾಲ್ ಆರ್ಯ, ಅರವಿಂದ್ ಪಾಂಡೆ, ಸುಬೋಧ್ ಯುನಿಯಲ್, ಗಣೇಶ್ ಜೋಷಿ, ಧನ್ ಸಿಂಗ್ ರಾವತ್, ರೇಖಾ ಆರ್ಯ, ಯತೀಶ್ವರಾನಂದ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ರನ್ ಮಷಿನ್: 2021ರಲ್ಲೇ 3ನೇ ಬಾರಿ ಡಕ್ ಔಟ್ ಆದ ವಿರಾಟ್!
ಅರವಿಂದ್ ಪಾಂಡೆ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದು, ಉಳಿದೆಲ್ಲಾ ಸಚಿವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸಂವಿಧಾನದಂತೆ ಉತ್ತರಾಖಂಡದಲ್ಲಿ ಸಿಎಂ ಸೇರಿದಂತೆ ಕೇವಲ 12 ಮಂದಿ ಸಂಪುಟ ಸಚಿವರು ಇರಬೇಕಾಗುತ್ತದೆ. ಈಗ ಸಂಪುಟ ದರ್ಜೆ ಸಚಿವರ ನೇಮಕ ಪೂರ್ಣಗೊಂಡಿದೆ.
ಬುಧವಾರ ತಿರಥ್ ಸಿಂಗ್ ರಾವತ್ ಉತ್ತರಾಖಂಡದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಹೈಕಮಾಂಡ್ ಸೂಚನೆಯಂತೆ ತ್ರಿವೇಂದ್ರ ಸಿಂಗ್ ರಾವತ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.