ಕೊಟ್ಟಾಯಂ: ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ.. ಅದು ಕಲಿಯುವ ಸಂಕಲ್ಪಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಕೊಟ್ಟಾಯಂನ 104 ವರ್ಷದ ಕುಟ್ಟಿಯಮ್ಮ (Kuttiyamma ) ಸಾಧಿಸಿ ತೋರಿಸಿದ್ದಾರೆ. ಈ ಇಳಿ ವಯಸ್ಸಲ್ಲೂ ಸಾಕ್ಷರತಾ ಪರೀಕ್ಷೆಯಲ್ಲಿ( literacy examination ) 100ಕ್ಕೆ 89 ಅಂಕ ಗಳಿಸಿದ ಕುಟ್ಟಿಯಮ್ಮ ತನ್ನ ಏರಿಯಾದಲ್ಲಿ ಸ್ಟಾರ್ ಎನಿಸಿದ್ದಾರೆ.
ಇವರು ಈಗ 4ನೇ ತರಗತಿಗೆ ಸೇರಲು ಮತ್ತು ತನ್ನ ತರಗತಿಗಳನ್ನು ಮುಂದುವರಿಸಲು ಅರ್ಹತೆ ಪಡೆದಿದ್ದಾರೆ. ಆಯರ್ಕುನ್ನಂ ಮೂಲದ ಕುಟ್ಟಿಯಮ್ಮ (Kuttiyamma, a native of Ayarkunnam) ಅವರು ಗಣಿತ ಮತ್ತು ಮಲಯಾಳಂ(Maths and Malayalam) ಮುಖ್ಯ ವಿಷಯಗಳ ಪರೀಕ್ಷೆಯನ್ನು ಬರೆದಿದ್ದಾರೆ.
ತಿರುವಂಚೂರಿನ ಕುನ್ನೂಮ್ಪುರಂನಲ್ಲಿ ಸಾಕ್ಷರತಾ ಶಿಕ್ಷಕರಾಗಿರುವ ಪ್ರೇರಕ್ ರಹಾನಾ(Prerak Rahana) ಅವರು ಕುಟ್ಟಿಯಮ್ಮ ಅವರಿಗೆ ಶಿಕ್ಷಕರಾಗಿದ್ದರು. ಅವರು ಪ್ರತಿದಿನ ಸಂಜೆ ಕುಟ್ಟಿಯಮ್ಮ ಅವರಿಗೆ ಅವರ ನಿವಾಸಕ್ಕೇ ಹೋಗಿ ಪಾಠ ಕಲಿಸುತ್ತಿದ್ದರು. ಶಾಲೆಗೆ ಹೋಗದ ಕುಟ್ಟಿಯಮ್ಮಗೆ ಓದಲು ಬರುತ್ತಿದ್ದರೂ ಬರೆಯಲು ಗೊತ್ತಿರಲಿಲ್ಲ. ಆದರೆ, ಈಗ ಕುಟ್ಟಿಯಮ್ಮ ಅಕ್ಷರಸ್ತೆ.
ಕುಟ್ಟಿಯಮ್ಮ ಅವರು ಬರೆಯಲು, ಕಲಿಯಲು ತುಂಬಾ ಉತ್ಸುಕರಾಗಿದ್ದರು. ಕುಟ್ಟಿಯಮ್ಮ ಅವರಿಗೆ ಶ್ರವಣದಲ್ಲಿ ಸ್ವಲ್ಪ ಸಮಸ್ಯೆಗಳಿವೆ. ಆದರೆ, ಬೇರೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳಿಲ್ಲ. ಅವರು ಪ್ರಕಾಶಮಾನವಾದ ಬೆಳಕಿನಲ್ಲಿಯೂ ಕನ್ನಡಕವಿಲ್ಲದೆ ಓದುತ್ತಾರೆ ಅಂತಾರೆ ಅವರ ಟೀಚರ್ ರಹಾನಾ.
ಕುಟ್ಟಿಯಮ್ಮ ಅವರ ಪತಿ ಟಿ ಕೆ ಕೊಂತಿ ಅವರು 2002ರಲ್ಲಿ ನಿಧನರಾದರು. ನಂತರ ಅವರು ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಕೊಟ್ಟಾಯಂನಿಂದ ಒಟ್ಟು 509 ಮಂದಿ ಮತ್ತು ಅಯರ್ಕುನ್ನಂನಿಂದ 7 ಮಂದಿ ಸಾಕ್ಷರತಾ ಪರೀಕ್ಷೆ ಬರೆದಿದ್ದಾರೆ. ಕುಟ್ಟಿಯಮ್ಮನ ಕೇಂದ್ರದಿಂದ ಪರೀಕ್ಷೆ ಬರೆದವರೆಲ್ಲರೂ ಉತ್ತೀರ್ಣರಾಗಿದ್ದು, 104 ವರ್ಷದ ಕುಟ್ಟಿಯಮ್ಮ ಟಾಪರ್ ಆಗಿದ್ದಾರೆ.