ಶಿಮ್ಲಾ: ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆ ಲಾಹೌಲ್ - ಸ್ಪಿಟಿಯಲ್ಲಿ ಸಂಭವಿಸಿದ ಮೇಘ ಸ್ಫೋಟದಿಂದಾಗಿ (ಮೋಡ ಕಡಿದು ಉಂಟಾದ ಪ್ರವಾಹ) ನಾಲ್ವರು ಸಾವನ್ನಪ್ಪಿದ್ದು, ಸುಮಾರು 9 ಜನರು ನಾಪತ್ತೆಯಾಗಿದ್ದಾರೆ ಎಂದು ಹಿರಿಯ ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಲಾಹೌಲ್‌ನ ಉದಯಪುರದಲ್ಲಿ ಸಂಭವಿಸಿದ ಮೇಘ ಸ್ಫೋಟದಿಂದಾಗಿ, ಇಬ್ಬರು ಕಾರ್ಮಿಕರು ಸೇರಿದಂತೆ ಖಾಸಗಿ ಜೆಸಿಬಿಯೊಂದು ಕೊಚ್ಚಿ ಹೋಗಿದೆ. 19 ವರ್ಷದ ಕಾರ್ಮಿಕ ಮೊಹಮ್ಮದ್ ಅಲ್ತಾಫ್ ಗಾಯಗೊಂಡಿದ್ದು, 9 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಮತ್ತು 4 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಕ್ತಾ ತಿಳಿಸಿದ್ದಾರೆ.
ಇನ್ನು ಗಾಯಾಳು ಅಲ್ತಾಫ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪತ್ತೆಯಾದವರನ್ನು ಹುಡುಕಲು ರಾಜ್ಯ ಪೊಲೀಸರು ಮತ್ತು ಐಟಿಬಿಪಿ ತಂಡಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ. ಆದರೆ, ನಿನ್ನೆ ರಾತ್ರಿ ನೀರಿನ ಹರಿವು ಹೆಚ್ಚಿದ್ದ ಕಾರಣ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಶೋಧ ಕಾರ್ಯಾಚರಣೆ ಪುನಾರಂಭಗೊಂಡಿದೆ.