ಪಾಟ್ನಾ(ಬಿಹಾರ): ರಾಜಧಾನಿ ಪಾಟ್ನಾದಲ್ಲಿ ನಡೆಯುತ್ತಿರುವ ಬಿಹಾರ ಡೈರಿ ಮತ್ತು ಕ್ಯಾಟಲ್ ಎಕ್ಸ್‌ಪೋದಲ್ಲಿ ಮುರ್ರಾ ತಳಿಯ 'ಗೋಲು-2' ಎಂಬ ಹೆಸರಿನ 10 ಕೋಟಿ ರೂಪಾಯಿ ಮೌಲ್ಯದ ಕೋಣ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಮೂರು ದಿನಗಳ ಎಕ್ಸ್‌ಪೋದಲ್ಲಿ 'ಗೋಲು-2' ಎಲ್ಲರ ಗಮನ ಸೆಳೆಯುತ್ತಿದೆ. ಆರು ವರ್ಷ ಪ್ರಾಯದ ಈ ಕೋಣ ತನ್ನ ತೂಕ ಮತ್ತು ಸದೃಢವಾದ ದೇಹಕ್ಕಾಗಿ ನೋಡುಗರನ್ನು ಹುಬ್ಬೇರಿಸುವಂತೆ ಮಾಡುತ್ತಿದೆ. ಭಾರಿ ಮೊತ್ತದ ಕೋಣ ಎಕ್ಸ್‌ಪೋಗೆ ಆಗಮಿಸಿದೆ ಎಂಬ ಸುದ್ದಿ ಗೊತ್ತಾಗಿದ್ದೇ ತಡ, ರಾಜ್ಯದ ವಿವಿಧೆಡೆಯಿಂದ ಬಂದ ಅಪಾರ ಸಂಖ್ಯೆಯ ಜನರು ಕೋಣವನ್ನು ಸುತ್ತುವರೆದು ಅದರ ವಿಶೇಷತೆ ಅರಿಯಲು ಮುಂದಾದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹರಿಯಾಣದ ಪಾಣಿಪತ್‌ನ ರೈತ ನರೇಂದ್ರ ಸಿಂಗ್ ಅವರು ಈ ಕೋಣದ ಜೊತೆಗೆ ಎಕ್ಸ್‌ಪೋಗೆ ಆಗಮಿಸಿದ್ದಾರೆ. ಹಲವು ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಗರಿಮೆ ಹೊಂದಿರುವ ವಿಶೇಷ ಕೋಣವಿದು. ಇದಕ್ಕೆ ತಿಂಗಳಿಗೆ ಸುಮಾರು ಎಂಟು ಲಕ್ಷ ರೂಪಾಯಿ ಆದಾಯ ತಂದುಕೊಡಬಲ್ಲ ಸಾಮರ್ಥ್ಯವೂ ಇದಕ್ಕಿದೆ. ಆನೆಯಾಕಾರದ ಕೋಣ 15 ಕ್ವಿಂಟಾಲ್ ತೂಕ, ಸುಮಾರು ಐದೂವರೆ ಅಡಿ ಎತ್ತರ, 3 ಅಡಿ ಅಗಲವಿದೆ.
ಪ್ರತಿದಿನ 35 ಕೆ.ಜಿ ಒಣ ಮತ್ತು ಹಸಿರು ಮೇವನ್ನು ಇದು ತಿನ್ನುತ್ತದೆ. ಅವರೆಕಾಯಿ ಕೂಡ ಇದರ ಅಚ್ಚುಮುಚ್ಚಿನ ಆಹಾರ. ಇದರ ಹೊರತಾಗಿ, ಆಹಾರದಲ್ಲಿ ಏಳೆಂಟು ಕಿಲೋ ಬೆಲ್ಲವೂ ಸೇರಿಕೊಳ್ಳುತ್ತದೆ. ಕೆಲವೊಮ್ಮೆ ತುಪ್ಪ ಸವಿಯುವ ಅವಕಾಶವೂ ಈ ಕೋಣಕ್ಕೆ ಸಿಗುತ್ತದೆ. ಪ್ರತಿದಿನ ಕನಿಷ್ಠ 10 ಲೀಟರ್ ಹಾಲು ಸೇವಿಸುತ್ತದೆ. ಇದರ ಆಹಾರಕ್ಕೆ ತಿಂಗಳಿಗೆ ಸುಮಾರು 30 ರಿಂದ 35 ಸಾವಿರ ರೂ. ವ್ಯಯಿಸಲಾಗುತ್ತದೆ. ಆಹಾರ ಹೊರತಾಗಿ ಐಷಾರಾಮಿ ಜೀವನ ಇದರ ಇನ್ನೊಂದು ಭಾಗ. ಹವಾನಿಯಂತ್ರಿತ ಕೋಣೆ ಹೊಂದಿರುವ ಗೋಲು-2, ಎಲ್ಲಿಗೆ ಹೋದರೂ ತಂಪಾಗಿಡಲು ನೀರಿನ ಟ್ಯಾಂಕರ್ ಕೂಡ ಇರುತ್ತದೆ. ಇದಕ್ಕೆ ಪ್ರತಿದಿನ ಸಾಸಿವೆ ಎಣ್ಣೆಯ ಮಸಾಜ್ ನಡೆಯುತ್ತದೆ. ಪ್ರತಿದಿನ ಐದು ಕಿಲೋಮೀಟರ್ ನಡೆಯುವುದು ಇದರ ದಿನದ ಕಾಯಕ. ಹೀಗೆ ಹಲವು ಅಚ್ಚರಿದಾಯಕ ಸಂಗತಿಯನ್ನು ಈ ಕೋಣದ ಕುರಿತು ಮಾಲೀಕರು ಹೇಳಿದರು.
₹10 ಕೋಟಿ ಬೆಲೆಗೆ ಕಾರಣವೇನು?: ''ಮುರ್ರಾ ತಳಿಯ ಈ ಕೋಣದ ವೀರ್ಯ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಇದು ಕರುಗಳ ಸಂತಾನೋತ್ಪತ್ತಿಗೆ ತುಂಬಾ ಯೋಗ್ಯವಾದುದು. ವಿದೇಶದಲ್ಲಿಯೂ ಕೋಣದ ವೀರ್ಯಕ್ಕೆ ಅತ್ಯುತ್ತಮ ಬೆಲೆ ಇದೆ. ಸಾಮಾನ್ಯ ಪ್ರಾಣಿಗಳೂ ಇದರ ಸಂಪರ್ಕಕ್ಕೆ ಬಂದರೆ ತಳಿಗಳಾಗಿ ಬದಲಾಗುತ್ತವೆ. ಇಡೀ ಪ್ರಪಂಚದಲ್ಲಿ ಇದಕ್ಕಿಂತ ಉತ್ತಮವಾದ ಕೋಣ ಮತ್ತೊಂದಿಲ್ಲ. ಹಾಗಾಗಿಯೇ ಇದಕ್ಕೆ 10 ಕೋಟಿ ರೂ ಬೆಲೆ ಇದೆ. ರೈತರಲ್ಲಿ ಅರಿವು ಮೂಡಿಸುವುದು ನಮ್ಮ ಉದ್ದೇಶ. ಹಾಗಾಗಿ ನಾವು ಇದನ್ನು ಪಾಣಿಪತ್‌ನಿಂದ ಕರೆದುಕೊಂಡು ಬಂದಿದ್ದೇವೆ. ಇದರ ವೀರ್ಯವನ್ನು ಬಳಸಿ ಉತ್ತಮ ಎಮ್ಮೆಗಳನ್ನು ಉತ್ಪಾದಿಸಬಹುದು. ಮುಖ್ಯವಾಗಿ ಹಸು ಸಾಕುವವರು ಇದರ ವಿಶೇಷತೆಯನ್ನು ಅರ್ಥಮಾಡಿಕೊಳ್ಳಬೇಕು'' ಎನ್ನುತ್ತಾರೆ ನರೇಂದ್ರ ಸಿಂಗ್ ಅವರ ಬೆಂಬಲಿಗ ಅಜಿತ್.
''ಮುರ್ರಾ ತಳಿಯ ಈ ಕೋಣಕ್ಕೆ ತನ್ನದೇ ಆದ ಸಾಕಷ್ಟು ವೈಶಿಷ್ಟ್ಯತೆಗಳಿವೆ. 30 ಸಾವಿರಕ್ಕೂ ಹೆಚ್ಚು ಕರುಗಳ ಸಂತಾನೋತ್ಪತ್ತಿಗೆ ಕಾರಣವಾಗಿರುವ ಗೋಲು-2 ಪ್ರತಿನಿತ್ಯ 26 ಲೀಟರ್ ಹಾಲು ನೀಡಿ ಫೇಮಸ್ ಆಗಿದ್ದ ಪಿಸಿ 483 ಹಾಗೂ ರಾಣಿಯ ಸಂತಾನದ ಭಾಗ'' ಎಂದು ಹರಿಯಾಣದ ಮತ್ತೊಬ್ಬ ರೈತ ಪ್ರವೀಣ್ ಫೌಜಿ ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರು ಕಂಬಳ: ಚಿನ್ನದ ಪದಕ ಪಡೆದ 'ಕಾಂತಾರ ಕೋಣಗಳು'