ಮುಂಬೈ: ಸಿಂಗಾಪುರದಿಂದ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕುಟುಂಬವೊಂದರ ಬಳಿ ಸುಮಾರು 1.05 ಕೋಟಿ ರೂಪಾಯಿ ಮೌಲ್ಯದ ಎರಡು ಕಿಲೋ 24 ಕ್ಯಾರೆಟ್ ಚಿನ್ನದ ಪುಡಿ ಪತ್ತೆಯಾಗಿದ್ದು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸೆಪ್ಟೆಂಬರ್ 11 ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 6E 1012 ಸಂಖ್ಯೆಯ ಇಂಡಿಗೋ ವಿಮಾನದ ಮೂಲಕ ಸಿಂಗಾಪುರದಿಂದ ಮುಂಬೈಗೆ ಆಗಮಿಸುತ್ತಿರುವ ಪುರುಷ, ಮಹಿಳೆ ಮತ್ತು ಎರಡು ವರ್ಷ ಒಂಬತ್ತು ತಿಂಗಳ ಮಗುವನ್ನು ಒಳಗೊಂಡ ಕುಟುಂಬವು ಚಿನ್ನವನ್ನು ತರುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು.
ಮಾಹಿತಿ ಮೇರೆಗೆ ತಪಾಸಣೆ ನಡೆಸಿದ ವೇಳೆ 2000 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನದ ಪುಡಿ ಒಳಗೊಂಡ ನಾಲ್ಕು ಪೌಚ್‌ಗಳು ಪತ್ತೆಯಾಗಿವೆ. ಈ ಚಿನ್ನದ ಪುಡಿಯ ಬೆಲೆ ಬರೋಬ್ಬರಿ 1 ಕೋಟಿ ಐದು ಲಕ್ಷದ 27 ಸಾವಿರದ 331 ರೂಪಾಯಿ ಆಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 33 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿ ವಶಕ್ಕೆ ಪಡೆದಿರುವ ಘಟನೆ ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಬೆಳಕಿಗೆ ಬಂದಿದೆ. ದುಬೈನಿಂದ ಪುಣೆಗೆ ಆಗಮಿಸಿದ್ದ ಇಬ್ಬರು ತಮ್ಮ ಖಾಸಗಿ ಭಾಗಗಳಲ್ಲಿ 33 ಲಕ್ಷ ಮೌಲ್ಯದ ಚಿನ್ನದ ಕ್ಯಾಪ್ಸುಲ್ ಅನ್ನು ಬಚ್ಚಿಟ್ಟಿದ್ದರು. ತಪಾಸಣೆ ವೇಳೆ ಚಿನ್ನದ ಕ್ಯಾಪ್ಸಲ್ಸ್ ಪತ್ತೆಯಾಗಿದ್ದವು. ಇಬ್ಬರು ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳ ಬಂಧಿಸಿ, ಅವರ ಬಳಿಯಿದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೀ ಬ್ಯಾಗ್ಗಳಲ್ಲಿ ವಜ್ರಗಳನ್ನು ಬಚ್ಚಿಟ್ಟು ಸಾಗಾಟ ಮಾಡುತ್ತಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಕಸ್ಟಮ್ಸ್ ಇಲಾಖೆಯ ಏರ್ ಇಂಟೆಲಿಜೆನ್ಸ್ ಯುನಿಟ್ ಅಧಿಕಾರಿಗಳು ತಪಾಸಣೆ ವೇಳೆ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ವಜ್ರಗಳು ಪತ್ತೆಯಾಗಿದ್ದವು. ಈ ಸಂಬಂಧ ಮುಕ್ಕಿಂ ರಝಾ, ಅಶ್ರಫ್ ಮನ್ಸೂರಿ ಎನ್ನುವವರನ್ನು ಬಂಧಿಸಲಾಗಿತ್ತು. ದುಬೈನಿಂದ ಮುಂಬೈಗೆ ಬಂದಿದ್ದ ಇವರು ಟೀ ಬ್ಯಾಗ್ನಲ್ಲಿ 34 ವಜ್ರಗಳನ್ನು ತಂದಿದ್ದರು. ಆ ವಜ್ರಗಳು 1559.68 ಕ್ಯಾರೆಟ್‌ಗಳಾಗಿದ್ದು, ಅವುಗಳ ಬೆಲೆ ರೂ.1 ಕೋಟಿ 49 ಲಕ್ಷ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಮಂಗಳೂರು ಏರ್ಪೋರ್ಟ್ನಲ್ಲಿ ₹14 ಲಕ್ಷದ ಚಿನ್ನ ಜಪ್ತಿ, ಪ್ರಯಾಣಿಕ ವಶಕ್ಕೆ