ಬೆಂಗಳೂರು : ನಾನು ಕೋಲಾರ ಹಾಗೂ ವರುಣಾ ಎರಡೂ ಕ್ಷೇತ್ರದಿಂದ ಟಿಕೆಟ್ ಕೇಳಿದ್ದೇನೆ. ಹೈಕಮಾಂಡ್ ಹೇಳಿದ್ರೆ ಎರಡೂ ಕಡೆ ಕಣಕ್ಕಿಳಿಯುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂದು ಕಾಂಗ್ರೆಸ್ನ ಮೊದಲ ಪಟ್ಟಿ ಬಿಡುಗಡೆ ಆಗಿದೆ. ವಿವಾದ ಇಲ್ಲದ ಕ್ಷೇತ್ರಗಳ ಪಟ್ಟಿ ಅಂತಿಮ ಮಾಡಿದೆ. ನಾನು ಎರಡು ಕ್ಷೇತ್ರಗಳಲ್ಲೂ ನಿಲ್ತೀನಿ. ಕೋಲಾರ ಮತ್ತು ವರುಣ ಎರಡು ಕ್ಷೇತ್ರಗಳನ್ನು ಕೇಳಿದ್ದೇನೆ. ಹೈಕಮಾಂಡ್ ಹೇಳಿದ್ರೆ ಎರಡು ಕಡೆ ನಿಲ್ತೀನಿ. ಸ್ಕ್ರೀನಿಂಗ್ ಹಾಗೂ ಸಿಇಸಿ ಸಭೆಯಲ್ಲಿ ಚರ್ಚೆ ಆಗಿತ್ತು. ಹೈಕಮಾಂಡ್ ವರುಣಾದಲ್ಲಿ ನಿಲ್ಲಿ ಅಂದಿದ್ದಾರೆ. ನಾನು ಕೋಲಾರ ಕೂಡ ಕೇಳಿದ್ದೇನೆ. ಆದ್ರೆ ಹೈಕಮಾಂಡ್ ನಿರ್ಧಾರ ಅಂತಿಮ ಎಂದು ಹೇಳಿದರು.
ರಾಹುಲ್ ಗಾಂಧಿ ಸದಸ್ಯತ್ವ ಅನರ್ಹ ವಿಚಾರ ಮಾತನಾಡಿ, ಇದು ಪ್ರಜಾಪ್ರಭುತ್ವದ ಕರಾಳ ದಿನ. ಬಿಜೆಪಿ ರಾಹುಲ್ ಗಾಂಧಿಯವರಿಗೆ ಹೆದರಿಕೊಂಡಿದ್ದಾರೆ. ಕೋರ್ಟ್ ಒಂದು ತಿಂಗಳು ಸಮಯ ನೀಡಿದೆ. ಆದ್ರೂ ತರಾತುರಿಯಲ್ಲಿ ಈ ನಿರ್ಧಾರ ಮಾಡಲಾಗಿದೆ. ತರಾತುರಿಯಲ್ಲಿ ರಾಹುಲ್ ಅವರನ್ನು ಅನರ್ಹ ಮಾಡಿದ್ದಾರೆ. ಭಾರತದಲ್ಲಿ ಇಂತಹ ಬೆಳವಣಿಗೆ ಆಗಿರಲಿಲ್ಲ. ಭಾರತ್ ಜೋಡೊ ಯಶಸ್ಸು ಬಿಜೆಪಿಗೆ ತಡೆಯಲಾಗಲಿಲ್ಲ. ಈ ಅನರ್ಹತೆಯಿಂದ ರಾಹುಲ್ ಮತ್ತಷ್ಟು ಜನಪ್ರಿಯರಾಗುತ್ತಾರೆ. ಬಿಜೆಪಿಗೆ ಲಾಭ ಆಗುತ್ತದೆ ಅಂದ್ರೆ ತಪ್ಪು ನಿರ್ಧಾರ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಆರು ಜನ ಹಾಲಿ ಶಾಸಕರ ಟಿಕೆಟ್ ಬಿಡುಗಡೆ ಆಗದ ವಿಚಾರ ಕುರಿತು ಮಾತನಾಡಿ, ಆ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಹಾಗಾಗಿ ಟಿಕೆಟ್ ಬಿಡುಗಡೆ ಆಗಿಲ್ಲ. ಎರಡನೇ ಪಟ್ಟಿಯಲ್ಲಿ ಬಿಡುಗಡೆ ಆಗುತ್ತದೆ. ಸರ್ವೆ ಮಾನದಂಡ ಒಂದೇ ಅಲ್ಲ. ಕಾರ್ಯಕರ್ತರ ಅಭಿಪ್ರಾಯವೂ ಮುಖ್ಯ ಆಗಿತ್ತು. ಕಾರ್ಯಾಧ್ಯಕ್ಷರು, ಸೆಕ್ರೆಟರಿ ಕೂಡ ವರದಿ ಕೊಟ್ಟಿದ್ದರು. ಜಿಲ್ಲಾ ಅಧ್ಯಕ್ಷ, ಬ್ಲಾಕ್ ಅಧ್ಯಕ್ಷ ಇವರ ಅಭಿಪ್ರಾಯ ಪಡೆದಿದ್ದೆವು. ಅದರ ಆಧಾರ ಮೇಲೆ ಟಿಕೆಟ್ ಹಂಚಿಕೆ ಮಾಡಿದ್ದೇವೆ ಎಂದು ಹೇಳಿದರು.
ಚುನಾವಣಾ ಸಮೀಪದಲ್ಲಿ ಮೀಸಲಾತಿ ಮರು ಪರಿಷ್ಕರಣೆ ಮಾಡಿದ್ದಾರೆ. ಅದರಿಂದ ಯಾರಿಗೂ ಅನುಕೂಲ ಆಗಲ್ಲ. ಇದು ರಾಜಕೀಯ ಲಾಭ ಪಡೆಯಲು ಮೀಸಲಾತಿ ಘೋಷಣೆ ಮಾಡಿದ್ದಾರೆ. ಎಲೆಕ್ಷನ್ ಗಿಮಿಕ್ ..ನಾಲ್ಕು ವರ್ಷಗಳಿಂದ ಮಾಡದವರು ಈಗ ಮಾಡಿದ್ದು ಏಕೆ? ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆದು ಬೇರೆಯವರಿಗೆ ಹಂಚಿಕೆ ಮಾಡಿದ್ದಾರೆ. ಈ ಮೀಸಲಾತಿ ಸಮುದಾಯ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕೆಪಿಸಿಸಿ ಅಪಾರ್ಟ್ಮೆಂಟ್ ಸೆಲ್ ಸಂವಾದದಲ್ಲಿ ಸಿದ್ದರಾಮಯ್ಯ ಮಾತನಾಡಿ, ಸಂವಾದದ ಸಲಹೆ ಸೂಚನೆ ಕ್ರೋಢೀಕರಿಸಿ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡುತ್ತೇವೆ. ಅಧಿಕಾರಕ್ಕೆ ಬಂದರೆ ಜಾರಿಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ನಮ್ಮ ಅಧಿಕಾರ ಅವಧಿಯಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದೇವೆ. ನಾವು ಕೊಟ್ಟ ಮಾತಿಗೆ ತಪ್ಪುವವರಲ್ಲ. ಮುಂದೆ ಕೂಡಾ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದರು.
ರಾಮಲಿಂಗಾ ರೆಡ್ಡಿ ಅನುಭವಿ ರಾಜಕಾರಣಿ. ಬೆಂಗಳೂರು ವಿಚಾರವಾಗಿ ರಾಮಲಿಂಗಾ ರೆಡ್ಡಿ ಅಭಿಪ್ರಾಯಕ್ಕೆ ಹೆಚ್ಚಿನ ಮಣೆ ಹಾಕುತ್ತೇವೆ. ಬಿಜೆಪಿ ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದ ಪಕ್ಷ. ಆಪರೇಷನ್ ಕಮಲ ಮೊದಲು ಪರಿಚಯ ಮಾಡಿದ್ದು ಬಿಜೆಪಿ. ಹಿಂಬಾಗಿಲಿದ ಬಂದ ಅನೈತಿಕ ಸರ್ಕಾರ ರಾಜ್ಯದಲ್ಲಿ ಇದೆ. ಬಿಜೆಪಿ ಯಾವತ್ತೂ ನುಡಿದಂತೆ ನಡೆದಿಲ್ಲ. 2018 ರಲ್ಲಿ 600 ಭರವಸೆ ಕೊಟ್ಟಿದ್ದರು. ಈಡೇರಿಸಿದ್ದು 50 ಮಾತ್ರ. ಡಬಲ್ ಇಂಜಿನ್ ಸರ್ಕಾರ ಹೇಳಿದ ರೀತಿಯಲ್ಲಿ ಕೆಲಸ ಮಾಡಿಲ್ಲ. ಯಾವ ಸಮಸ್ಯೆ ಬಗೆಹರಿಸಿಲ್ಲ. ಕಚ್ಚಾ ತೈಲ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಆಗಿದೆ. ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿಲ್ಲ. ಗ್ಯಾಸ್ ಸಿಲಿಂಡರ್ ದರವೂ ದುಬಾರಿ ಆಗಿದೆ. ಮಧ್ಯಮ ವರ್ಗದ ಜನರಿಗೆ ಇದರಿಂದ ದೊಡ್ಡ ಹೊಡೆತವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಕೋಲಾರ, ಬಾದಾಮಿ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದ ಹೈಕಮಾಂಡ್.. ಸಿದ್ದರಾಮಯ್ಯ ಸ್ಪರ್ಧೆ ಕುತೂಹಲ