ಬೆಳಗಾವಿ: ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ್ದ ಕ್ರಾಂತಿಯ ನೆಲ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಚನ್ನಮ್ಮನ ನಾಡಾದ ಕಿತ್ತೂರು ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರಾನೇರ ಪೈಪೋಟಿ ಕಂಡುಬಂದಿದೆ.
ಈ ಕ್ಷೇತ್ರ ಸದ್ಯ ಬಿಜೆಪಿ ವಶದಲ್ಲಿದೆ. 2018ರ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಮಾಜಿ ಸಚಿವ ಡಿ.ಬಿ. ಇನಾಮದಾರ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಹಾಂತೇಶ ದೊಡ್ಡಗೌಡರ 32,862 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದೀಗ ಮತ್ತೆ ದೊಡ್ಡಗೌಡರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದರೆ, ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಬಾಸಾಹೇಬ್ ಪಾಟೀಲ್ ಈ ಸಲ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಷೇತ್ರದ ಹಿನ್ನೆಲೆ: ಕಿತ್ತೂರು ಮತಕ್ಷೇತ್ರಕ್ಕೆ ಈ ಮೊದಲು ಸಂಪಗಾವ-2 ಎಂಬ ಹೆಸರಿತ್ತು. 1957ರ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ನಬಿಸಾಬ್ ಮುಗಟಸಾಬ್ ನಾಗನೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. 1962ರಲ್ಲಿ ನಡೆದ ಚುನಾವಣೆಯಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ನಬಿಸಾಬ್ ಮುಗಟಸಾಬ್ ನಾಗನೂರ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಸಂಪಗಾವ-2 ಹೆಸರು ಬದಲಾಯಿಸಿ ಕಿತ್ತೂರು ಎಂದು ಮರು ನಾಮಕರಣ ಮಾಡಲಾಯಿತು. 1967ರಲ್ಲಿ ಎಸ್.ಬಿ.ಮಲ್ಲಪ್ಪ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. 1972ರಲ್ಲಿ ಬಿ.ಡಿ.ಇನಾಮದಾರ್ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
1978ರಲ್ಲಿ ಜನತಾ ಪಕ್ಷದಿಂದ ಪಿ.ಬಿ.ಪಾಟೀಲ(ಅರವಳ್ಳಿ) ಗೆದ್ದಿದ್ದರು. 1983 ಮತ್ತು 1985ರಲ್ಲಿ ಜನತಾ ಪಕ್ಷದಿಂದ ಡಿ.ಬಿ.ಇನಾಮದಾರ್ ಗೆಲುವು ಸಾಧಿಸಿದ್ದರು. 1989ರಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಬಾಬಾಗೌಡ ಪಾಟೀಲ ಗೆದ್ದಿದ್ದರು. 1994 ಮತ್ತು 1999ರಲ್ಲಿ ಡಿ.ಬಿ.ಇನಾಮದಾರ್ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. 2004ರಲ್ಲಿ ಡಿ.ಬಿ. ಅವರನ್ನು ಮಣಿಸಿ ಮೊದಲ ಬಾರಿಗೆ ಕಿತ್ತೂರಿನಲ್ಲಿ ಸುರೇಶ ಮಾರಿಹಾಳ ಕಮಲ ಅರಳಿಸುವ ಮೂಲಕ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದರು. ನಂತರ 2008ರ ಚುನಾವಣೆಯಲ್ಲೂ ಸುರೇಶ ಮಾರಿಹಾಳ ಗೆದ್ದು ಬೀಗಿದ್ದರು. 2013ರಲ್ಲಿ ಮತ್ತೆ ಡಿ.ಬಿ.ಇನಾಮದಾರ್ ಗೆದ್ದಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಡಿ.ಬಿ. ಇನಾಮದಾರ್ ಅವರನ್ನು ಸೋಲಿಸಿ ಮಹಾಂತೇಶ ದೊಡ್ಡಗೌಡರ ವಿಜಯಶಾಲಿಯಾಗಿದ್ದರು.
ಮತದಾರರ ಮಾಹಿತಿ: ಕ್ಷೇತ್ರದಲ್ಲಿ ಒಟ್ಟು 1,92,700 ಮತದಾರರಿದ್ದು, 97,230 ಪುರುಷ ಮತದಾರರು, 95,290 ಮಹಿಳಾ ಮತದಾರರಿದ್ದಾರೆ. ಈವರೆಗೆ ನಡೆದ 14 ಚುನಾವಣೆಗಳಲ್ಲಿ 7 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, 3 ಬಾರಿ ಜನತಾ ಪಕ್ಷ, 3 ಬಾರಿ ಬಿಜೆಪಿ ಮತ್ತು 1 ಬಾರಿ ರೈತ ಸಂಘದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
5 ಬಾರಿ ಗೆದ್ದಿದ್ದ ಇನಾಮದಾರ್: ಜನತಾ ಪಕ್ಷದಿಂದ 2 ಬಾರಿ ಮತ್ತು ಕಾಂಗ್ರೆಸ್ನಿಂದ 3 ಬಾರಿ ಹೀಗೆ ಒಟ್ಟು ಐದು ಬಾರಿ ಗೆದ್ದಿದ್ದ ಡಿ.ಬಿ.ಇನಾಮದಾರ್ ಅವರು ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಅಬಕಾರಿ ಮಂತ್ರಿಯಾಗಿದ್ದರು. ಅದೇ ರೀತಿ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
2 ಕ್ಷೇತ್ರದಲ್ಲಿ ಗೆದ್ದಿದ್ದ ಬಾಬಾಗೌಡ ಪಾಟೀಲ: 1989ರಲ್ಲಿ ಕಿತ್ತೂರು ಮತ್ತು ಧಾರವಾಡ ಗ್ರಾಮೀಣ ಎರಡೂ ಕ್ಷೇತ್ರಗಳಲ್ಲೂ ರೈತ ಸಂಘದಿಂದ ಸ್ಪರ್ಧಿಸಿದ್ದ ಬಾಬಾಗೌಡ ಪಾಟೀಲ್, ಎರಡೂ ಕ್ಷೇತ್ರಗಳಲ್ಲೂ ಗೆದ್ದು ಇತಿಹಾಸ ನಿರ್ಮಿಸಿದ್ದರು. ಬಳಿಕ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ರೈತ ಸಂಘದ ಸಂಸ್ಥಾಪಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಕ್ಷೇತ್ರ ಬಿಟ್ಟು ಕೊಟ್ಟು, ಅವರನ್ನು ಗೆಲ್ಲಿಸಿಕೊಂಡು ಬಂದಿದ್ದರು.
ಇನಾಮದಾರ್ ಧಣಿಗೆ ಮೊದಲ ಬಾರಿ ತಪ್ಪಿದ ಟಿಕೆಟ್: 1983ರಿಂದ 2018ರವರೆಗೂ ಮಾಜಿ ಸಚಿವ ಡಿ.ಬಿ.ಇನಾಮದಾರ್ ಅವರಿಗೆ ಟಿಕೆಟ್ ತಪ್ಪಿದ್ದು ತೀರಾ ವಿರಳ. ಆದರೆ, ಇದೇ ಮೊದಲ ಬಾರಿ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಅನಾರೋಗ್ಯ ಹಿನ್ನೆಲೆ ಇನಾಮದಾರ್ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಪಟ್ಟು ಹಿಡಿದಿದ್ದರು. ಆದರೆ, ಇದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್, ಇನಾಮದಾರ್ ಅಳಿಯ ಬಾಬಾಸಾಹೇಬ್ ಪಾಟೀಲ್ಗೆ ಮಣೆ ಹಾಕುವ ಮೂಲಕ ಕಿತ್ತೂರು ಕ್ಷೇತ್ರದಲ್ಲಿ ಹೊಸ ನಾಯಕತ್ವಕ್ಕೆ ಮುನ್ನುಡಿ ಬರೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ದೆಹಲಿ ಮಟ್ಟದಲ್ಲಿ ಉನ್ನತ ಮಟ್ಟದ ಪ್ರಭಾವ ಹೊಂದಿದ್ದ ಡಿ.ಬಿ. ಅನಾರೋಗ್ಯದಿಂದಾಗಿ ಈ ಬಾರಿ ಸೈಡ್ ಲೈನ್ ಆಗಿದ್ದಾರೆ. ಆ ಮೂಲಕ ಕಿತ್ತೂರಿನಲ್ಲಿ ಹಳೆ ತಲೆಮಾರಿನ ರಾಜಕೀಯ ಅಧ್ಯಾಯಕ್ಕೆ ತೆರೆ ಬಿದ್ದಿದ್ದು, ಹೊಸ ತಲೆಮಾರಿನ ರಾಜಕೀಯ ಆರಂಭವಾಗಿದೆ.
ಬಿಜೆಪಿ ಟಿಕೆಟ್‌ಗಾಗಿ ಫೈಟ್: ಕಿತ್ತೂರು ಮತಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕರಿದ್ದರೂ ಕೂಡ ಟಿಕೆಟ್‌ಗಾಗಿ ಹಲವರು ಲಾಬಿ ನಡೆಸುತ್ತಿದ್ದಾರೆ. ಶಾಸಕ ಮಹಾಂತೇಶ ದೊಡ್ಡಗೌಡರ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರೆ, ಡಾ.ಬಸವರಾಜ ಹಾರೂಗೊಪ್ಪ, ಧಾರವಾಡ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಈ ಬಾರಿ ನಮಗೆ ಅವಕಾಶ ನೀಡುವಂತೆ ಧ್ವನಿ ಎತ್ತಿದ್ದಾರೆ. ಇನ್ನು ಆಮ್ ಆದ್ಮಿ ಪಕ್ಷದಿಂದ ಈ ಬಾರಿಯೂ ಆನಂದ ಹಂಪನ್ನವರಗೆ ಟಿಕೆಟ್ ಸಿಕ್ಕಿದ್ದು, ಜೆಡಿಎಸ್ ಪಕ್ಷದಿಂದ ಈವರೆಗೆ ಅಭ್ಯರ್ಥಿ ಘೋಷಣೆ ಆಗಿಲ್ಲ.
ಕೈ ಪಾಳಯದಲ್ಲಿ ಬಂಡಾಯದ ಬಾವುಟ?: ಕಾಂಗ್ರೆಸ್ ಟಿಕೆಟ್‌ಗಾಗಿ ಡಿ.ಬಿ.ಇನಾಮದಾರ್, ಬಾಬಾಸಾಹೇಬ್ ಪಾಟೀಲ್ ಮತ್ತು ಹಬೀಬ್ ಶಿಲೇದಾರ್ ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ ಅಳೆದು ತೂಗಿ ಕಾಂಗ್ರೆಸ್ ಹೈಕಮಾಂಡ್ ಬಾಬಾಸಾಹೇಬ್ ಪಾಟೀಲ್ಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಿಸಿದೆ. ಡಿ.ಬಿ.ಇನಾಮದಾರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಇನಾಮದಾರ್ ಸೊಸೆ ಲಕ್ಷ್ಮೀ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಕೇಳಿ ಬಂದಿತ್ತು. ಆದರೆ ಟಿಕೆಟ್ ತಪ್ಪಿದ್ದರಿಂದ ಆಕ್ರೋಶಗೊಂಡಿರುವ ಅವರ ಅಭಿಮಾನಿಗಳು ಲಕ್ಷ್ಮೀ ಅವರಿಗೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಇನಾಮದಾರ್ ಮನೆತನದ ರಾಜಕೀಯ ನಡೆ ಸದ್ಯ ಕುತೂಹಲ ಮೂಡಿಸಿದೆ. ಇನ್ನೋರ್ವ ಆಕಾಂಕ್ಷಿಯಾಗಿದ್ದ ಹಬೀಬ್ ಶಿಲೇದಾರ್ ಕೂಡ ಪಕ್ಷೇತರವಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಬಿಜೆಪಿಗೆ ವಿರೋಧಿ ಅಲೆ, ಕೈಗೆ ಬಂಡಾಯದ ಬಿಸಿ!: ಕಿತ್ತೂರು ಮತಕ್ಷೇತ್ರದಲ್ಲಿ ಈ ಬಾರಿ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. 40 ಪರ್ಸೆಂಟ್ ಕಮಿಷನ್ ಆರೋಪ. ಬೆಲೆ ಏರಿಕೆ ಸೇರಿ ಮತ್ತಿತರ ವಿಚಾರಗಳು ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಟಿಕೆಟ್ ವಂಚಿತರು ಬಂಡಾಯವಾಗಿ ಸ್ಪರ್ಧಿಸುವ ಭೀತಿ ಎದುರಾಗಿದೆ. ಅಂತಿಮವಾಗಿ ರಾಣಿ ಚನ್ನಮ್ಮಾಜಿ ಯಾರಿಗೆ ಆಶೀರ್ವಾದ ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ.
ಕ್ಷೇತ್ರದ ಶಾಸಕರ ವಿವರ:
1957 - ನಬಿಸಾಬ ಮುಗಟಸಾಬ ನಾಗನೂರ - ಅವಿರೋಧ ಆಯ್ಕೆ
1962 - ನಬಿಸಾಬ ಮುಗಟಸಾಬ ನಾಗನೂರ - ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1967 - ಎಸ್.ಬಿ.ಮಲ್ಲಪ್ಪ - ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1972 - ಬಿ.ಡಿ.ಇನಾಮದಾರ - ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1978 - ಪಿ.ಬಿ.ಪಾಟೀಲ(ಅರವಳ್ಳಿ) - ಜನತಾ ಪಕ್ಷ
1983 - ಡಿ.ಬಿ.ಇನಾಮದಾರ - ಜನತಾ ಪಕ್ಷ
1985 - ಡಿ.ಬಿ.ಇನಾಮದಾರ - ಜನತಾ ಪಕ್ಷ
1989 - ಬಾಬಾಗೌಡ ಪಾಟೀಲ - ಕರ್ನಾಟಕ ರಾಜ್ಯ ರೈತ ಸಂಘ
1994 - ಡಿ.ಬಿ.ಇನಾಮದಾರ - ಕಾಂಗ್ರೆಸ್
1999 - ಡಿ.ಬಿ.ಇನಾಮದಾರ - ಕಾಂಗ್ರೆಸ್
2004 - ಸುರೇಶ ಮಾರಿಹಾಳ - ಬಿಜೆಪಿ
2008 - ಸುರೇಶ ಮಾರಿಹಾಳ - ಬಿಜೆಪಿ
2013 - ಡಿ.ಬಿ.ಇನಾಮದಾರ - ಕಾಂಗ್ರೆಸ್
2018 - ಮಹಾಂತೇಶ ದೊಡ್ಡಗೌಡರ - ಬಿಜೆಪಿ
ಇದನ್ನೂ ಓದಿ: ಟಿಕೆಟ್‌ಗಾಗಿ ಒತ್ತಡವಿದೆ, ಗೆಲ್ಲುವ ಸಾಧ್ಯತೆ ನೋಡಿ ಹಂಚಿಕೆ: ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಎಂದ ಬಿಎಸ್ವೈ