ಬೆಂಗಳೂರು: ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಅವರದ್ದೇ ಕ್ಷೇತ್ರದಲ್ಲಿ ಕಟ್ಟಿಹಾಕಲು ಬಿಜೆಪಿ ರಣತಂತ್ರ ಹೂಡಿದ್ದು, ಇಬ್ಬರು ಹಿರಿಯ ಸಚಿವರನ್ನು ಕಣಕ್ಕಿಳಿಸಿದೆ. ಅಲ್ಲದೇ, ಅವರಿಗೆ ಇನ್ನೊಂದು ಕ್ಷೇತ್ರದಲ್ಲೂ ಟಿಕೆಟ್ ನೀಡಲಾಗಿದೆ. 2 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಪ್ರಯೋಗವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಆರ್ಟಿನಗರ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಟಕ್ಕರ್ ನೀಡಲು ಅವರ ಕ್ಷೇತ್ರದಲ್ಲಿ ನಮ್ಮ ಪ್ರಭಾವಿ ಸಚಿವರನ್ನು ಕಣಕ್ಕಿಳಿಸಲಾಗಿದೆ. ಅವರಿಗೆ ಪರ್ಯಾಯವಾಗಿ ಮತ್ತೊಂದು ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಈ ಬಾರಿ ತುರುಸಿನ ಸ್ಪರ್ಧೆ ಇರಲಿದೆ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ 2 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಪ್ರಯೋಗ ನಡೆಸಲಾಗಿತ್ತು. ಅದೇ ತಂತ್ರವನ್ನು ಈ ಬಾರಿಯೂ ಮಾಡಲಾಗಿದೆ. ಹಿರಿಯ ಸಚಿವರಾದ ವಿ.ಸೋಮಣ್ಣ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವರುಣಾದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅದರ ಜೊತೆಗೆ ಚಾಮರಾಜನಗರ ಕ್ಷೇತ್ರಕ್ಕೂ ಟಿಕೆಟ್ ನೀಡಲಾಗಿದೆ ಎಂದಿದ್ದಾರೆ.
ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಸ್ಪರ್ಧೆಗೆ ಆರ್. ಅಶೋಕ್ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಇದರ ಜೊತೆಗೆ ಅವರಿಗೆ ಪದ್ಮನಾಭನಗರ ಕ್ಷೇತ್ರದ ಟಿಕೆಟ್ ಕೂಡ ನೀಡಲಾಗಿದೆ. ಇಬ್ಬರಿಗೂ ಪಕ್ಷ ದೊಡ್ಡ ಹೊಣೆ ನೀಡಿದೆ. ಕನಕಪುರ ಹಾಗೂ ವರುಣ ಎರಡೂ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಅಳೆದು ತೂಗಿ ಆಯ್ಕೆ: ಅಭ್ಯರ್ಥಿಗಳ ವಿಚಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲವನ್ನೂ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಹೋದ ಬಾರಿ ಸಚಿವ ಶ್ರೀರಾಮುಲು ಅವರಿಗೆ ಮೊಳಕಾಲ್ಮೂರು ಸಹಿತ ಬಾದಾಮಿಯಲ್ಲೂ ಟಿಕೆಟ್ ನೀಡಲಾಗಿತ್ತು. ಸಿದ್ದರಾಮಯ್ಯ ಅವರ ವಿರುದ್ಧ ಬಾದಾಮಿಯಲ್ಲಿ ಕಣಕ್ಕಿಳಿಸಲಾಗಿತ್ತು. ಅದೇ ತಂತ್ರದ ಭಾಗವಾಗಿ ಈ ಬಾರಿಯೂ ಅಶೋಕ್ ಮತ್ತು ಸೋಮಣ್ಣಗೆ ಎರಡು ಕಡೆ ಕೊಟ್ಟಿದ್ದೇವೆ. ಈ ಬಾರಿ ನಾವು ಯುವ ಸಮೂಹಕ್ಕೆ ಒತ್ತು ಕೊಟ್ಟಿದ್ದೇವೆ ಎಂದರು.
ಈಗ 189 ಕ್ಷೇತ್ರಗಳ ಪಟ್ಟಿ ಬಿಡುಗಡೆ ಆಗಿದೆ. 35 ಕ್ಷೇತ್ರ ಬಾಕಿ ಇದೆ. ಎರಡನೇ ಪಟ್ಟಿಯಲ್ಲಿ ಎಲ್ಲರಿಗೂ ಟಿಕೆಟ್ ಸಿಗುತ್ತದೆ ಎಂದು ಹಾಲಿಗಳಿಗೆ ಭರವಸೆ ನೀಡಿದ ಸಿಎಂ, ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ದೇಶದಲ್ಲಿ ಕನಸು ಕಾಣಲು ಟ್ಯಾಕ್ಸ್ ಇಲ್ಲ. ಕಾಂಗ್ರೆಸ್ನವರು ಕನಸು ಕಾಣಲಿ ಎಂದರು.
ಹೆಚ್ಡಿಕೆ ವಿರುದ್ಧ ಸಿಪಿವೈ: ಇನ್ನು, ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರನ್ನು ಕಣಕ್ಕಿಳಿಸಿದೆ. ನಿರೀಕ್ಷೆಯಂತೆ ಮೂವರು ಪ್ರತಿಪಕ್ಷಗಳ ನಾಯಕರ ವಿರುದ್ಧ ಬಿಜೆಪಿ ಭರ್ಜರಿ ತಂತ್ರ ಹೂಡಿದೆ. ಸಿದ್ದರಾಮಯ್ಯ ಅವರಿಗೆ ಈಗಾಗಲೇ ವರುಣ ಟಿಕೆಟ್ ನೀಡಲಾಗಿದೆ.
ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಅವರೇ ಘೋಷಿಸಿದ್ದು, ಈವರೆಗೂ ಆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಸಿದ್ದರಾಮಯ್ಯ ಅವರು ಕೋಲಾರದಲ್ಲೂ ಸ್ಪರ್ಧೆ ಮಾಡಿದರೆ, ಅವರ ಅಲ್ಲಿ ವರ್ತೂರು ಪ್ರಕಾಶ್ ಅವರನ್ನು ಎದುರಿಸಲಿದ್ದಾರೆ.
ಓದಿ: ಸಚಿವ ಅಂಗಾರ, ರಘುಪತಿ ಭಟ್ ಸೇರಿ 7 ಹಾಲಿ ಶಾಸಕರಿಗಿಲ್ಲ ಬಿಜೆಪಿ ಟಿಕೆಟ್: ಇನ್ನೂ 16 ಹಾಲಿಗಳ ಕ್ಷೇತ್ರ ಕುತೂಹಲ!