ಬೆಂಗಳೂರು: ''ರಾಮರಾಜ್ಯ ಪರಿಕಲ್ಪನೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಈ ಬಾರಿಯ ಬಿಜೆಪಿ ಪ್ರಣಾಳಿಕೆ ಇರಲಿದೆ. ವಾರದೊಳಗೆ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು'' ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ, ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪಕ್ಷದ ಪ್ರಣಾಳಿಕೆ ಸಮಿತಿಯಲ್ಲಿ ಸಚಿವ ಬಿ.ಸಿ.ನಾಗೇಶ್, ಭಗವಂತ ಖೂಬಾ ಸೇರಿದಂತೆ ಹಲವರು ಇದ್ದಾರೆ. ಎಲ್ಲರೂ ಸೇರಿ ಸಭೆ ಮಾಡಿದ್ದೇವೆ. ಪ್ರಣಾಳಿಕೆಗೆ ಅಭಿಪ್ರಾಯ ಸಂಗ್ರಹ ಮಾಡಿ, ಎಲ್ಲ ಸಲಹೆ ಪಡೆದಿದ್ದೇವೆ. ವಿಭಾಗ, ಜಿಲ್ಲೆ, ತಾಲೂಕುವಾರು ಪಟ್ಟಿ ಮಾಡಿದ್ದೇವೆ. ಈ ಬಾರಿ ನಮ್ಮ ಸರ್ಕಾರ ಬಂದರೆ, ಏನು ಮಾಡಬಹುದು ಅಂತ ಪ್ರಣಾಳಿಕೆಯಲ್ಲಿ ಹೇಳಲಿದ್ದೇವೆ'' ಎಂದರು.
ಅಂಗೈಯಲ್ಲಿ ಚಂದ್ರ ತೋರಿಸುವ ಕೆಲಸ ಮಾಡಲ್ಲ - ಡಾ.ಸುಧಾಕರ್: ''ನಮ್ಮ ಕಮಿಟಿಯಲ್ಲಿ ಸಾಕಷ್ಟು ಎಕ್ಸ್‌ಪರ್ಟ್ ಇದ್ದಾರೆ. ಕರ್ನಾಟಕ ರಾಜ್ಯಕ್ಕೆ ನಮ್ಮ ಪ್ರಣಾಳಿಕೆ ಮಾದರಿಯಾಗಲಿದೆ. ದೇಶಕ್ಕೂ ಮಾದರಿಯಾಗಲಿದೆ. ಹೊಸತನ, ಬದುಕು ಕಟ್ಟಿಕೊಡುವ ರೀತಿಯ ಪ್ರಣಾಳಿಕೆ ಇರಲಿದೆ. ಅಂಗೈಯಲ್ಲಿ ಚಂದ್ರ ತೋರಿಸುವ ಕೆಲಸವನ್ನಂತೂ ನಾವು ಮಾಡಲ್ಲ. ನಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪ್ರಣಾಳಿಕೆ ಇರಲಿದೆ. ರಾಮರಾಜ್ಯ ನಿರ್ಮಾಣ ಪರಿಕಲ್ಪನೆ ಅಡಿ ರಾಜ್ಯ ನಿರ್ಮಾಣಕ್ಕೆ ಪೂರಕವಾಗಿ ನಮ್ಮ ಪ್ರಣಾಳಿಕೆ ಇರಲಿದೆ'' ಎಂದು ಅವರು ಹೇಳಿದರು.
''ಸದ್ಯ ನಮ್ಮ ನಾಯಕರು ದೆಹಲಿಯಲ್ಲಿದ್ದಾರೆ. ಅವರು ಬಂದ ಬಳಿಕ ವಾರದೊಳಗೆ ಪ್ರಣಾಳಿಕೆ ಬಿಡುಗಡೆ ಆಗಲಿದೆ. ಗ್ರೇಟರ್ ಬೆಂಗಳೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಬಯಲು ಸೀಮೆ ಹೀಗೆ ವಲಯವಾರು ಪ್ರಣಾಳಿಕೆ ಮಾಡಿದ್ದೇವೆ'' ಎಂದು ಸುಧಾಕರ್ ಮಾಹಿತಿ ನೀಡಿದರು.
ಜೆಡಿಎಸ್, ಆಪ್ಗೆ ಗುಡ್ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾದ ಮುಖಂಡರು: ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಎಎಪಿಯ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ರೆಡ್ಡಿ, ಮುಖಂಡ ಅಶೋಕ್ ಹಾಗೂ ಹಲವು ಬೆಂಬಲಿಗರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಬಿಜೆಪಿ ಸೇರಿದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಈ ಬಾರಿಯ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ನಿಶ್ಚಿತವಾಗಿ ಬಿಜೆಪಿ ಅಭ್ಯರ್ಥಿಗಳಿಗೆ ವಿಜಯಮಾಲೆ ತೊಡಿಸುವ ವಿಶ್ವಾಸ ವ್ಯಕ್ತಪಡಿಸಿದರು. ಸಚಿವ ಡಾ.ಸುಧಾಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮತ್ತಿತರ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರು ಮತ್ತು ಕಾರ್ಯಕರ್ತರನ್ನು ಸ್ವಾಗತಿಸಿದರು.
ಚುನಾವಣೆ ಘೋಷಣೆಯಾದ ನಂತರವೂ ಬಿಜೆಪಿ ಸೇರುವವರ ಸಂಖ್ಯೆ ವೃದ್ಧಿಸುತ್ತಲೇ ಇದ್ದು, ಜನರ ನಡುವೆ ವಿಶ್ವಾಸಾರ್ಹ ಪಕ್ಷವಾಗಿ ಗುರುತಿಸಿಕೊಂಡಿರುವ ಬಿಜೆಪಿಯು ಈ ಬಾರಿಯ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದರು.
ಬಿಜೆಪಿ ನಾಯಕರ ಪ್ರವಾಸ ಯಶಸ್ವಿಗೆ ಪೂಜೆ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕರ್ನಾಟಕ ರಾಜ್ಯದ ಪ್ರವಾಸ ವಿಭಾಗದ ವತಿಯಿಂದ ಇಂದು ಬೆಂಗಳೂರಿನ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸಲು ಪ್ರಾರ್ಥನೆ ಸಲ್ಲಿಸಲಾಯಿತು. ಈ ನಿಟ್ಟಿನಲ್ಲಿ ರಾಜ್ಯ, ರಾಷ್ಟ್ರೀಯ ನಾಯಕರ ಪ್ರವಾಸ ಯಶಸ್ವಿಯಾಗುವಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರವಾಸ ವಿಭಾಗದ ಪದಾಧಿಕಾರಿಗಳು ಇದ್ದರು.
ಇದನ್ನೂ ಓದಿ: ಅಮಿತ್ ಶಾ ನಿವಾಸದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ!