ಕಲಬುರಗಿ: ಪ್ರಸಿದ್ಧ ಸೂಫಿ ಸಂತ ಹಝ್ರತ್ ಖ್ವಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿ ಹಾಗೂ ಕೆಬಿಎನ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸೈಯದ್ ಶಹಾ ಖುಸ್ರೋ ಹುಸೇನಿ (79) ಅನಾರೋಗ್ಯದಿಂದ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ.
ಹಝ್ರತ್ ಖ್ವಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿ ಸೈಯದ್ ಶಹಾ ವಿಧಿವಶ
Published : 8 hours ago
ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕಲಬುರಗಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಸಚಿವರಾದ ಪ್ರೀಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ಸಂಸದ ಅಸಾದುದ್ದೀನ್ ಓವೈಸಿ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು. ಬಳಿಕ ಸರ್ಕಾರಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಸರ್ಕಾರದ ಪರ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಗೌರವ ನಮನ ಸಲ್ಲಿಸಿದರು.
2017ರಲ್ಲಿ ಸೈಯದ್ ಅವರಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. 1972ರಿಂದಲೇ ಕೆಬಿಎನ್ ಶಿಕ್ಷಣ ಸಂಸ್ಥೆಯೊಂದಿಗೆ ನಂಟು ಹೊಂದಿದ್ದ ಇವರು, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅಲ್ಲದೇ ಅನೇಕ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿದ್ದಾರೆ. ಕೆಬಿಎನ್ ದರ್ಗಾ ದೇಶದ 2ನೇ ಅಜ್ಮೀರ್ ಎಂದೇ ಖ್ಯಾತಿ ಪಡೆದಿದೆ.