ಜೈನ್ ಕಾಲೇಜಿನಲ್ಲಿ ಎಥ್ನಿಕ್ ಡೇ ಸಂಭ್ರಮ : ಸಾಂಪ್ರದಾಯಿಕ ಉಡುಗೆ ತೊಟ್ಟು ಸಖತ್ ಹೆಜ್ಜೆ ಹಾಕಿದ ವಿದ್ಯಾರ್ಥಿನಿಯರು
Published : Nov 30, 2024, 10:16 PM IST
ದಾವಣಗೆರೆ : ಜಿಲ್ಲೆಯ ಜೈನ್ ಕಾಲೇಜಿನಲ್ಲಿ ಇಂದು ಎಥ್ನಿಕ್ ಡೇ ಆಯೋಜನೆ ಮಾಡಲಾಗಿತ್ತು. ಸದಾ ವಿದ್ಯಾಭ್ಯಾಸದಲ್ಲಿ ನಿರತರಾಗುತ್ತಿದ್ದ ವಿದ್ಯಾರ್ಥಿನಿಯರು ಇಂದು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಸಖತ್ ಎಂಜಾಯ್ ಮಾಡಿದ್ರು.
ದೇಸಿ ಉಡುಪು, ಸಾಂಪ್ರದಾಯಿಕ ಉಡುಪುಗಳು ಆಧುನಿಕ ಕಾಲದಲ್ಲಿ ಮರೆಯಾಗುತ್ತಿರುವುದರಿಂದ ಅದನ್ನು ಉಳಿಸಲು ಕಾಲೇಜು ವತಿಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾಲೇಜಿನ ಯುವಕರು ತಮಗಿಷ್ಟವಾದ ಸಾಂಪ್ರದಾಯಿಕ ಉಡುಗೆ ತೊಟ್ಟು ಡಿಜೆ ಸದ್ದಿಗೆ ಸಖತ್ ಹೆಜ್ಜೆ ಹಾಕಿದರು. ಅಲ್ಲದೇ ಕಾಲೇಜಿನ ಸಿಬ್ಬಂದಿ ಕೂಡ ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದರು.
ಪ್ರತಿವರ್ಷ ಜೈನ್ ಕಾಲೇಜಿನಲ್ಲಿ ಎಥ್ನಿಕ್ ಡೇ ಆಚರಣೆ ಮಾಡಲಾಗುತ್ತದೆ. ಈ ಬಾರಿ ಮರಾಠಿ, ಲಂಬಾಣಿ, ಪಂಜಾಬಿ, ಕೊಡಗು ಭಾಗದ ಸಾಂಪ್ರದಾಯಿಕ ಉಡುಗೆ ತೊಟ್ಟು ಕಲರ್ ಫುಲ್ ಆಗಿ ವಿದ್ಯಾರ್ಥಿನಿಯರು ಕಾಣಿಸುತ್ತಿದ್ದರು. ಹುಬ್ಬಳಿ ಭಾಗದ ಉಡುಗೆ, ಇಳಕಲ್ ಸೀರೆ, ಬಂಜಾರ, ಕೊಡಗು ಉಡುಗೆ ಹೀಗೆ ನಾನಾ ರೀತಿಯ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂತಸದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯುವಕರು ಯಕ್ಷಗಾನ, ವಿವಿಧ ರಾಜರುಗಳ ವೇಷ, ಕನ್ನಡಪರ ಸಂಘಟನೆಗಳ ಗೆಟಪ್, ರೈತ ಸಂಘದ ಶಾಲು ಹೊತ್ತಿದ್ದು ವಿಶೇಷವಾಗಿತ್ತು.