ನವದೆಹಲಿ:ಪ್ರೊಫೈಲ್ ಚಿತ್ರಗಳ ಸ್ಕ್ರೀನ್ಶಾಟ್ ತೆಗೆದುಕೊಳ್ಳುವುದನ್ನು ನಿರ್ಬಂಧಿಸುವ ಹೊಸ ವೈಶಿಷ್ಟ್ಯವನ್ನು ವಾಟ್ಸ್ಆ್ಯಪ್ ಶೀಘ್ರದಲ್ಲೇ ಹೊರತರಲಿದೆ ಎಂದು ವರದಿಯಾಗಿದೆ. ಆರಂಭದಲ್ಲಿ ಹೊಸ ಫೀಚರ್ ಐಒಎಸ್ (ಐಫೋನ್) ಬಳಕೆದಾರರಿಗೆ ಲಭ್ಯವಾಗಲಿದೆ. ಈ ಬಗ್ಗೆ ವಾಬೀಟಾಇನ್ಫೋ (WABetaInfo) ಮಾಹಿತಿ ಹಂಚಿಕೊಂಡಿದೆ.
ಬೇರೆ ವಾಟ್ಸ್ಆ್ಯಪ್ ಬಳಕೆದಾರರ ಪ್ರೊಫೈಲ್ ಚಿತ್ರದ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಪ್ರಯತ್ನಿಸಿದರೆ, "ಪ್ರತಿಯೊಬ್ಬರ ಗೌಪ್ಯತೆಯನ್ನು ರಕ್ಷಿಸಲು ಪ್ರೊಫೈಲ್ ಫೋಟೋಗಳ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ" ಎಂಬ ಸಂದೇಶ ಕಾಣಿಸಲಿದೆ.
ವರದಿಯ ಪ್ರಕಾರ, ಈ ವೈಶಿಷ್ಟ್ಯವು ಪ್ರೊಫೈಲ್ ಹೊಂದಿರುವವರ ಒಪ್ಪಿಗೆಯಿಲ್ಲದೆ ಅವರ ಪ್ರೊಫೈಲ್ ಫೋಟೋಗಳನ್ನು ಸೆರೆಹಿಡಿಯುವುದನ್ನು ಮತ್ತು ಶೇರ್ ಮಾಡುವುದನ್ನು ನಿರ್ಬಂಧಿಸುವ ಮೂಲಕ ವಾಟ್ಸ್ ಆ್ಯಪ್ ಬಳಕೆದಾರರಿಗೆ ಮತ್ತೊಂದು ಹಂತದ ಪ್ರೈವಸಿ ರಕ್ಷಣೆಯನ್ನು ನೀಡಲಿದೆ.
ಆದಾಗ್ಯೂ ಜನ ಇತರ ಸಾಧನಗಳು ಅಥವಾ ಕ್ಯಾಮೆರಾಗಳ ಮೂಲಕ ಬಾಹ್ಯವಾಗಿ ಚಿತ್ರವನ್ನು ಸೆರೆಹಿಡಿಯಬಹುದಾದರೂ, ಅಪ್ಲಿಕೇಶನ್ನೊಳಗೆ ಸ್ಕ್ರೀನ್ ಶಾಟ್ ಸೆರೆಹಿಡಿಯುವುದನ್ನು ನಿರ್ಬಂಧಿಸುವುದು ಖಂಡಿತವಾಗಿಯೂ ಪ್ರೊಫೈಲ್ ಫೋಟೋಗಳ ಅನಧಿಕೃತ ಹಂಚಿಕೆಯನ್ನು ಕಡಿಮೆ ಮಾಡಲಿದೆ ಎಂದು ವರದಿ ತಿಳಿಸಿದೆ.
ಬಳಕೆದಾರರು ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದನ್ನು ತಡೆಯುವ ಮೂಲಕ ಅನುಮತಿಯಿಲ್ಲದೆ ಪ್ರೊಫೈಲ್ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ಶೇರ್ ಮಾಡುವ ಅಪಾಯವನ್ನು ಕಡಿಮೆ ಮಾಡಲು ಈ ವಾಟ್ಸ್ ಆ್ಯಪ್ ವೈಶಿಷ್ಟ್ಯವು ಉಪಯುಕ್ತವಾಗಿದೆ. ಪ್ರೊಫೈಲ್ ಚಿತ್ರಗಳ ಸ್ಕ್ರೀನ್ ಶಾಟ್ ನಿರ್ಬಂಧಿಸುವ ವೈಶಿಷ್ಟ್ಯವು ಸದ್ಯ ಅಭಿವೃದ್ಧಿಯ ಹಂತದಲ್ಲಿದ್ದು, ಮುಂದಿನ ಅಪ್ಡೇಟ್ಗಳ ಮೂಲಕ ಇದು ಬಳಕೆದಾರರಿಗೆ ಲಭ್ಯವಾಗಲಿದೆ.
ಏತನ್ಮಧ್ಯೆ ವಾಟ್ಸ್ಆ್ಯಪ್ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಆಂಡ್ರಾಯ್ಡ್ ಬಳಕೆದಾರರು ಚಾಟ್ ಟ್ಯಾಬ್ನಿಂದ ತಮ್ಮ ನೆಚ್ಚಿನ ಚಾಟ್ಗಳ ಪಟ್ಟಿಯನ್ನು ತ್ವರಿತವಾಗಿ ನೋಡಬಹುದಾದ "ಫಿಲ್ಟರ್" ವೈಶಿಷ್ಟ್ಯ ಇದಾಗಿದೆ. ಈ ಹೊಸ ಚಾಟ್ ಫಿಲ್ಟರ್ ಬಳಸಿ ಬಳಕೆದಾರರು ತಮ್ಮ ನೆಚ್ಚಿನ ಸಂಪರ್ಕಗಳು ಮತ್ತು ಗುಂಪುಗಳೊಂದಿಗೆ ನಿರ್ದಿಷ್ಟ ಸಂಭಾಷಣೆಗಳನ್ನು ಸುಲಭವಾಗಿ ನೋಡಬಹುದು ಮತ್ತು ಅವುಗಳನ್ನು ಆದ್ಯತಾ ಪಟ್ಟಿಗೆ ಸೇರಿಸಬಹುದು.
ಎನ್ಕ್ರಿಪ್ಷನ್ ನಿಲ್ಲಿಸಿದರೆ ಆ್ಯಪ್ ಸ್ಥಗಿತ: ತನ್ನ ಆ್ಯಪ್ನಲ್ಲಿ ಹಂಚಿಕೊಳ್ಳಲಾಗುವ ಸಂದೇಶಗಳ ಎನ್ಕ್ರಿಪ್ಷನ್ ಅನ್ನು ನಿಲ್ಲಿಸುವಂತೆ ಒತ್ತಾಯಿಸಿದರೆ ಭಾರತದಲ್ಲಿ ತನ್ನ ಆ್ಯಪ್ ಅನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಉಂಟಾಗಲಿದೆ ಎಂದು ವಾಟ್ಸ್ಆ್ಯಪ್ ಕಳೆದ ವಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ. ಹೊಸದಾಗಿ ತಿದ್ದುಪಡಿ ಮಾಡಲಾದ ಐಟಿ ನಿಯಮಗಳನ್ನು ಪ್ರಶ್ನಿಸಿ ವಾಟ್ಸ್ಆ್ಯಪ್ ಮತ್ತು ಫೇಸ್ ಬುಕ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಾಟ್ಸ್ ಆ್ಯಪ್ ಈ ಹೇಳಿಕೆ ನೀಡಿದೆ.
ಇದನ್ನೂ ಓದಿ: ಆಲ್ಫಾಫೋಲ್ಡ್ 3: ಮಾನವ ಅಣುಗಳ ರಚನೆ ಊಹಿಸಬಲ್ಲ ಎಐ ತಯಾರಿಸಿದ ಗೂಗಲ್ - ARTIFICIAL INTELLIGENCE