Food Packaging: ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್ಗೆ ಗುರಿಯಾಗುತ್ತಿದ್ದು, ಈ ಕುರಿತು ಅಗತ್ಯ ಕಾಳಜಿ ವಹಿಸಲೇಬೇಕಿದೆ. ಈಗ ನಾವು ತಿನ್ನುವ ಆಹಾರದ ಮೂಲಕವಲ್ಲ, ಆಹಾರವನ್ನು ಪ್ಯಾಕೇಜಿಂಗ್ ಮಾಡುವ ವಸ್ತುಗಳಿಂದಲೂ ಸ್ತನ ಕ್ಯಾನ್ಸರ್ ಹರಡುತ್ತದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಹೌದು. ಪ್ಲಾಸ್ಟಿಕ್, ಪೇಪರ್ ಮತ್ತು ಕಾರ್ಡ್‌ಬೋರ್ಡ್ ಸೇರಿದಂತೆ ಆಹಾರ ಪ್ಯಾಕೇಜಿಂಗ್ ವಸ್ತುಗಳಲ್ಲಿ ಸುಮಾರು 200 ಸಂಭಾವ್ಯ ಸ್ತನ ಕಾರ್ಸಿನೋಜೆನ್‌ಗಳನ್ನು ಸಂಶೋಧಕರ ತಂಡ ಗುರುತಿಸಿದೆ. ಅಷ್ಟೇ ಏಕೆ?, ಇವುಗಳು ಅಸ್ತಿತ್ವದಲ್ಲಿರುವ ನಿಯಂತ್ರಣದ ಹೊರತಾಗಿಯೂ ಗಮನಾರ್ಹ ಅಪಾಯಗಳನ್ನು ಉಂಟುಮಾಡುತ್ತವೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.
ಮಂಗಳವಾರ 'ಫ್ರಾಂಟಿಯರ್ಸ್ ಇನ್ ಟಾಕ್ಸಿಕಾಲಜಿ'ಯಲ್ಲಿ ಪ್ರಕಟವಾದ ಅಧ್ಯಯನ ವರದಿ ದೈನಂದಿನ ಉತ್ಪನ್ನಗಳಲ್ಲಿ ಈ ರಾಸಾಯನಿಕಗಳನ್ನು ನಿರ್ಮೂಲನೆ ಮಾಡಲು ಬಲವಾದ ಕ್ರಮಗಳನ್ನು ಒತ್ತಿ ಹೇಳಿದೆ.
"ಈ ಅಧ್ಯಯನ ಬಹಳ ಮುಖ್ಯವಾಗಿದೆ. ಏಕೆಂದರೆ, ಇದು ಸ್ತನ ಕ್ಯಾನ್ಸರ್ಗೆ ಕಾರಣವಾಗುವ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದನ್ನು ತಡೆಯಲು ಒಂದು ದೊಡ್ಡ ಅವಕಾಶ ಇದೆ ಎಂಬುದನ್ನು ತೋರಿಸುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಕಡಿಮೆ ಮಾಡುವ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆಗೆ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಫುಡ್ ಪ್ಯಾಕೇಜಿಂಗ್ ಫೋರಂನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಯನದ ಸಹ-ಲೇಖಕರೂ ಆಗಿರುವ ಜೇನ್ ಮಂಕೆ ತಿಳಿಸಿದರು.
ಸ್ತನ ಕ್ಯಾನ್ಸರ್ ಎಂಬುದು ವಿಶ್ವಾದ್ಯಂತ ಎರಡನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, 2022ರಲ್ಲಿ 2.3 ಮಿಲಿಯನ್ ಮಹಿಳೆಯರು ಈ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಈ ಪೈಕಿ 6,70,000 ಮಂದಿ ಜಾಗತಿಕವಾಗಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.