Read Aloud With Newborns:ಮಕ್ಕಳ ಜೀವನದ ಆರಂಭಿಕ ವರ್ಷಗಳಲ್ಲಿ ಪೋಷಕರು ಪುಸ್ತಕಗಳನ್ನು ಹಿಡಿದು ಚಿಕ್ಕ ಮಕ್ಕಳೊಂದಿಗೆ ಗಟ್ಟಿಯಾಗಿ ಓದಬೇಕು. ಇದು ಮಕ್ಕಳ ಬದುಕಿನ ಮೇಲೆ ಒಳ್ಳೆಯ ಪರಿಣಾಮಗಳನ್ನು ಬೀರುತ್ತದೆ ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ. ಮಗುವಿನ ಜನನದ ಮೊದಲ ವರ್ಷಗಳು ಪೋಷಕರಿಗೆ ಬಹಳ ಮುಖ್ಯ. ಈ ಸಮಯದಲ್ಲಿ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತದೆ. ಏಕೆಂದರೆ ಇದು ಮಕ್ಕಳ ಮೆದುಳು ಬೆಳೆಯುವ ಸಮಯ ಎಂದು ತಿಳಿಸಿದ್ದಾರೆ.
ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ ವೈದ್ಯರು, ಮಕ್ಕಳ ಜನನ ಕಾಲದಿಂದಲೇ ಪೋಷಕರು ಓದುವುದನ್ನು ಪ್ರಾರಂಭಿಸಿ ಎಂದು ಸಲಹೆ ಮಾಡಿದ್ದಾರೆ. ಸಂಶೋಧನೆಯ ಪ್ರಮುಖ ಲೇಖಕ ಪೆರ್ರಿ ಕ್ಲಾಸ್, ಚಿಕ್ಕ ಮಕ್ಕಳೊಂದಿಗೆ ಓದುವುದು ಸಂತೋಷದಾಯಕ. ಭಾಷೆ ಮತ್ತು ಸಂಭಾಷಣೆಯ ಕ್ಷಣಗಳು ದೈನಂದಿನ ಜೀವನವನ್ನು ಬಲಪಡಿಸುತ್ತವೆ. ಇದು ನಿಮ್ಮ ನಡುವೆ ಒಳ್ಳೆಯ ಬಂಧಗಳನ್ನು ಬೆಸೆಯುತ್ತದೆ. ಮಕ್ಕಳ ಮೆದುಳಿನ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.
ಸಂಶೋಧನೆಯ ಸಹ ಲೇಖಕ ಮತ್ತು ಕೌನ್ಸಿಲ್ ಆನ್ ಅರ್ಲಿ ಚೈಲ್ಡ್‌ಹುಡ್‌ನ ಅಧ್ಯಕ್ಷ ದೀಪೇಶ್ ನವಸಾರಿಯಾ ಅವರ ಪ್ರಕಾರ, ವರ್ಣರಂಜಿತ ಚಿತ್ರಗಳು ಮತ್ತು ಶ್ರೀಮಂತ ಭಾಷೆಯಿಂದ ಕೂಡಿದ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಓದುವುದರಿಂದ ಮಕ್ಕಳಲ್ಲಿ ಆರೋಗ್ಯದಾಯಕ ಬೆಳವಣಿಗೆ ರೂಪುಗೊಳ್ಳುತ್ತದೆ. ಟಚ್‌ಸ್ಕ್ರೀನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳು ಜನಪ್ರಿಯವಾಗಿರಬಹುದು. ಆದರೆ ಅವು ಮಕ್ಕಳನ್ನು ಪ್ರತ್ಯೇಕಿಸುತ್ತವೆ. ಆ ಸಾಧನಗಳು ಸಂಬಂಧ ಬಲಪಡಿಸುವ ಪ್ರಯೋಜನಗಳನ್ನು ಒದಗಿಸುವುದಿಲ್ಲ.