PM E-DRIVE: ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವುದರ ಜೊತೆಗೆ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ರಚಿಸಲು PM E-DRIVE ಯೋಜನೆಯು ಅಕ್ಟೋಬರ್ 1 ರಿಂದ ಅಂದ್ರೆ ಇಂದಿನಿಂದ ಜಾರಿಗೆ ಬರಲಿದೆ. ಈ ಯೋಜನೆಯ ಉದ್ಘಾಟನಾ ಸಮಾರಂಭ ಮಂಗಳವಾರ ದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಖಾತೆ ಸಚಿವ ಭೂಪತಿ ರಾಜು ಶ್ರೀನಿವಾಸ ವರ್ಮ ಭಾಗವಹಿಸಲಿದ್ದಾರೆ.
10,900 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿರುವ ಈ ಯೋಜನೆಯು ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2026 ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೇಂದ್ರವು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. ಪಿಎಂ ಇ-ಡ್ರೈವ್ ಯೋಜನೆಯ ಭಾಗವಾಗಿ, ಕೇಂದ್ರವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಇ-ಆಂಬ್ಯುಲೆನ್ಸ್ಗಳು ಮತ್ತು ಇ-ಟ್ರಕ್ಗಳಿಗೆ ಸಬ್ಸಿಡಿ ನೀಡುತ್ತದೆ.
ಯಾವುದಕ್ಕೆ ಎಷ್ಟು ಸಬ್ಸಿಡಿ?:ಯೋಜನೆ ಜಾರಿಯಲ್ಲಿರುವ ಅವಧಿಯಲ್ಲಿ ಬಸ್ಗಳಿಗೆ 4,391 ರೂ. ಕೋಟಿ ಪಾವತಿಸಲಾಗುವುದು, ಕೇಂದ್ರವು ದ್ವಿಚಕ್ರ ವಾಹನಗಳಿಗೆ ರೂ.1772 ಕೋಟಿ ವೆಚ್ಚ ಮಾಡುವ ಗುರಿ ಹೊಂದಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳ ವರ್ಗಕ್ಕೆ 2024-25 ಆರ್ಥಿಕ ವರ್ಷದಲ್ಲಿ ಪ್ರತಿ ಕಿಲೋವ್ಯಾಟ್ಗೆ ರೂ.5,000 ಮತ್ತು ಮುಂದಿನ ವರ್ಷದಲ್ಲಿ ರೂ.2,500 ದರದಲ್ಲಿ ಪಾವತಿಸಲಾಗುತ್ತದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಗರಿಷ್ಠ ರೂ.10,000 ಮತ್ತು ಇ-ರಿಕ್ಷಾಕ್ಕೆ ಗರಿಷ್ಠ ರೂ.25,000 ಪಾವತಿಸಲಾಗುತ್ತದೆ. ಮುಂದಿನ ವರ್ಷ ದ್ವಿಚಕ್ರ ವಾಹನಗಳಿಗೆ 5,000 ಮತ್ತು ಇ-ರಿಕ್ಷಾಗಳಿಗೆ 12,500 ರೂ. ಸಬ್ಸಿಡಿ ದೊರೆಯಲಿದೆ.