ಬೆಂಗಳೂರು: ಚಂದ್ರಯಾನ-3 ನೌಕೆಯು ಚಂದ್ರನ ಮೇಲೆ ಲ್ಯಾಂಡ್ ಆಗಿದ್ದ ಸ್ಥಳಕ್ಕೆ 'ಶಿವ ಶಕ್ತಿ' ಎಂದು ಹೆಸರಿಡಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (ಐಎಯು) (International Astronomical Union) ಒಪ್ಪಿಗೆ ಸೂಚಿಸಿದೆ. ಚಂದ್ರಯಾನ-3 ಮಿಷನ್ ಯಶಸ್ವಿಯಾದ ನಂತರ, ನೌಕೆ ಲ್ಯಾಂಡ್ ಆಗಿದ್ದ ಸ್ಥಳಕ್ಕೆ 'ಶಿವ ಶಕ್ತಿ' ಎಂದು ಹೆಸರಿಸುವುದಾಗಿ ಆಗಸ್ಟ್ 26, 2023ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಮಾರ್ಚ್ 19ರಂದು ಐಎಯು ಇದಕ್ಕೆ ಅನುಮೋದನೆ ನೀಡಿದೆ.
"ಚಂದ್ರಯಾನ -3ರ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ 'ಶಿವ ಶಕ್ತಿ' ಎಂದು ಹೆಸರಿಸಲು ಐಎಯು ಕಾರ್ಯಕಾರಿ ಸಮಿತಿ ಅನುಮೋದಿಸಿದೆ" ಎಂದು ಐಎಯು ಗ್ರಹಗಳ ಹೆಸರುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುವ ಗ್ರಹಗಳ ನಾಮಕರಣದ ಗೆಜೆಟಿಯರ್ (Gazetteer of Planetary Nomenclature) ತಿಳಿಸಿದೆ.
"ಶಿವಶಕ್ತಿ ಎಂಬುದು ಭಾರತೀಯ ಪುರಾಣದಲ್ಲಿ ಉಲ್ಲೇಖಿತ ಪದವಾಗಿದ್ದು, ಇದು ಪ್ರಕೃತಿಯ ಪುರುಷ (ಶಿವ) ಮತ್ತು ಸ್ತ್ರೀ (ಶಕ್ತಿ) ಶಕ್ತಿಗಳನ್ನು ಬಿಂಬಿಸುತ್ತದೆ" ಎಂದು ಐಎಯು ಶಿವಶಕ್ತಿ ಪದದ ಅರ್ಥ ವಿವರಣೆ ನೀಡಿದೆ.
ಆಗಸ್ಟ್ 28, 2023ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಕೇಂದ್ರದಲ್ಲಿ ಮಾತನಾಡಿ, ಚಂದ್ರಯಾನ -3 ಮಿಷನ್ನ ಲ್ಯಾಂಡಿಂಗ್ ಪಾಯಿಂಟ್ ಅನ್ನು "ಶಿವ ಶಕ್ತಿ ಪಾಯಿಂಟ್" ಎಂದು ಕರೆಯಲಾಗುವುದು ಎಂದು ಘೋಷಿಸಿದ್ದರು.
ಹಾಗೆಯೇ ಚಂದ್ರಯಾನ -2 ಲ್ಯಾಂಡಿಂಗ್ ವೈಫಲ್ಯದ ಸ್ಥಳವನ್ನು "ತಿರಂಗಾ ಪಾಯಿಂಟ್" ಎಂದು ಕರೆಯಲಾಗುವುದು. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದ ದಿನವನ್ನು (ಆಗಸ್ಟ್ 23) ದೇಶದಲ್ಲಿ "ರಾಷ್ಟ್ರೀಯ ಬಾಹ್ಯಾಕಾಶ ದಿನ" ಎಂದು ಆಚರಿಸಲಾಗುವುದು ಎಂದು ಪಿಎಂ ಮೋದಿ ಹೇಳಿದ್ದಾರೆ. ಐಎಯು ಇದು ಗ್ರಹಗಳ ಮೇಲ್ಮೈ ವೈಶಿಷ್ಟ್ಯಗಳಿಗೆ ಹೆಸರುಗಳನ್ನು ನಿಗದಿಪಡಿಸುವ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಪ್ರಾಧಿಕಾರವಾಗಿದೆ. ಇದಕ್ಕಾಗಿ ಅದು ಕೆಲ ನಿರ್ದಿಷ್ಟ ನಿಯಮಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತದೆ.
ಕಳೆದ ವರ್ಷ ಆಗಸ್ಟ್ 23ರಂದು, ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಅಜ್ಞಾತ ಪ್ರದೇಶದಲ್ಲಿ ಇಳಿದು ಚಂದ್ರನ ನೆಲವನ್ನು ಸ್ಪರ್ಶಿಸಿ ಪ್ರಜ್ಞಾನ್ ರೋವರ್ ಅನ್ನು ನಿಯೋಜಿಸಿತ್ತು. ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿದೆ ಮತ್ತು ಒಂದು ಚಂದ್ರ ದಿನ (14 ಭೂಮಿಯ ದಿನಗಳು) ದಷ್ಟು ಅವಧಿಯಲ್ಲಿ ಅನೇಕ ಚಿತ್ರಗಳನ್ನು ಸೆರೆಹಿಡಿದು, ಅವುಗಳೊಂದಿಗೆ ಸಾಕಷ್ಟು ಮಾಹಿತಿಯನ್ನು ಭೂಮಿಗೆ ರವಾನಿಸಿದೆ.
ಇದನ್ನೂ ಓದಿ: 8 ಸಾವಿರದೊಳಗಿನ ಫೋನ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಾದರೆ ಹೊಸ ಸ್ಮಾರ್ಟ್ಫೋನ್ O2 ಬಿಡುಗಡೆಯಾಗಿದೆ ನೋಡಿ - new smartphone