ನವದೆಹಲಿ: ಗೂಗಲ್ನ ಜೆಮಿನಿ ಪ್ರೊ ಎಐ ಚಾಟ್ ಬಾಟ್ ಈಗ 230 ಕ್ಕೂ ಹೆಚ್ಚು ದೇಶ ಮತ್ತು ಪ್ರಾಂತ್ಯಗಳಲ್ಲಿ 9 ಭಾರತೀಯ ಭಾಷೆಗಳು ಸೇರಿದಂತೆ 40 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಒಂಬತ್ತು ಭಾರತೀಯ ಭಾಷೆಗಳಲ್ಲಿ ಹಿಂದಿ, ತಮಿಳು, ತೆಲುಗು, ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ ಮತ್ತು ಉರ್ದು ಸೇರಿವೆ. ಕಳೆದ ಡಿಸೆಂಬರ್ನಲ್ಲಿ ಜೆಮಿನಿ ಪ್ರೊ ಅನ್ನು ಇಂಗ್ಲಿಷ್ನಲ್ಲಿ ತನ್ನ ಎಐ ಚಾಟ್ ಬಾಟ್ ಬಾರ್ಡ್ಗೆ ಗೂಗಲ್ ಅಳವಡಿಸಿತ್ತು.
ಕಂಪನಿಯು ಬಾರ್ಡ್ನಲ್ಲಿ ತನ್ನ 'ಡಬಲ್-ಚೆಕ್ ವೈಶಿಷ್ಟ್ಯ'ವನ್ನು 40 ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ. ಈಗಾಗಲೇ ಇಂಗ್ಲಿಷ್ನಲ್ಲಿ ಇದನ್ನು ಲಕ್ಷಾಂತರ ಜನ ಬಳಸುತ್ತಿದ್ದಾರೆ.
"ನೀವು 'ಜಿ' ಐಕಾನ್ ಅನ್ನು ಕ್ಲಿಕ್ ಮಾಡಿದಾಗ, ಬಾರ್ಡ್ ತನ್ನ ಪ್ರತಿಕ್ರಿಯೆ ನೀಡುವ ಮುನ್ನ ಆ ವಿಷಯದ ಬಗ್ಗೆ ಇಂಟರ್ನೆಟ್ನಲ್ಲಿ ಮತ್ತಾವುದಾದರೂ ಮಾಹಿತಿ ಇದೆಯೇ ಎಂಬುದನ್ನು ಮೌಲ್ಯಮಾಪನ ಮಾಡುತ್ತದೆ. ಇದನ್ನು ಮೌಲ್ಯಮಾಪನ ಮಾಡಲು ಸಾಧ್ಯವಾದರೆ, ನೀವು ಹೈಲೈಟ್ ಮಾಡಿದ ನುಡಿ ಅಥವಾ ವಾಕ್ಯಗಳನ್ನು ಕ್ಲಿಕ್ ಮಾಡಬಹುದು ಮತ್ತು ಸರ್ಚ್ನಿಂದ ಸಿಕ್ಕ ಮಾಹಿತಿಯನ್ನು ಬೆಂಬಲಿಸುವ ಅಥವಾ ವಿರೋಧಿಸುವ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು" ಎಂದು ಗೂಗಲ್ ಬ್ಲಾಗ್ಪೋಸ್ಟ್ನಲ್ಲಿ ವಿವರಿಸಿದೆ.
ಇದಲ್ಲದೆ ಬಾರ್ಡ್ ಇಂಗ್ಲಿಷ್ನಲ್ಲಿ ಚಿತ್ರಗಳನ್ನು ಸೃಷ್ಟಿಸುವ ವೈಶಿಷ್ಟ್ಯವನ್ನು ಗೂಗಲ್ ಈಗಾಗಲೇ ಪ್ರಪಂಚದ ಬಹುತೇಕ ದೇಶಗಳಲ್ಲಿ ಜಾರಿಗೊಳಿಸಿದೆ. ಈ ವೈಶಿಷ್ಟ್ಯ ಈಗಲೂ ಉಚಿತವಾಗಿದೆ. ಈ ಹೊಸ ವೈಶಿಷ್ಟ್ಯವು ಕಂಪನಿಯ ನವೀಕರಿಸಿದ 'ಇಮೇಜನ್ 2 ಮಾದರಿ'ಯಿಂದ (Imagen 2 model) ಚಾಲಿತವಾಗಿದೆ. ವೇಗವಾಗಿ ಉತ್ತಮ ಗುಣಮಟ್ಟದ ಫೋಟೋರಿಯಲಿಸ್ಟಿಕ್ ಔಟ್ಪುಟ್ ನೀಡುವಂತೆ ಇಮೇಜನ್ 2 ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ.
ಬಳಕೆದಾರರು ವಿವರಣೆಯನ್ನು ಟೈಪ್ ಮಾಡಿದರೆ ಸಾಕು, ಅದರ ಚಿತ್ರ ಸೃಷ್ಟಿಯಾಗುತ್ತದೆ. ಉದಾಹರಣೆಗೆ "ಸರ್ಫ್ ಬೋರ್ಡ್ ಸವಾರಿ ಮಾಡುವ ನಾಯಿಯ ಚಿತ್ರರಚಿಸಿ" ಎಂದು ಟೈಪ್ ಮಾಡಿದರೆ ವಿಭಿನ್ನ ಕಲ್ಪನೆಯ ವ್ಯಾಪಕ ಶ್ರೇಣಿಯ ಚಿತ್ರಗಳನ್ನು ಬಾರ್ಡ್ ಸೃಷ್ಟಿಸುತ್ತದೆ. ತನ್ನ ಎಐ ಮಾದರಿಗಳ ಸುರಕ್ಷತೆ ಮತ್ತು ಗೌಪ್ಯತೆ ರಕ್ಷಣೆಗಳನ್ನು ಸುಧಾರಿಸಲು ಹೊಸ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುವುದಾಗಿ ಗೂಗಲ್ ಉಲ್ಲೇಖಿಸಿದೆ.
ಜೆಮಿನಿ ಇದು ಗೂಗಲ್ ನ ಅತ್ಯಂತ ಶಕ್ತಿಶಾಲಿ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಎಐ ಮಾದರಿಗಳ ಶ್ರೇಣಿಯಾಗಿದೆ. ಜೆಮಿನಿ ಪ್ರೊ ಗಮನಾರ್ಹವಾಗಿ ಬೃಹತ್ ಮಲ್ಟಿಟಾಸ್ಕ್ ಲ್ಯಾಂಗ್ವೇಜ್ ಅಂಡರ್ ಸ್ಟಾಂಡಿಂಗ್ (Massive Multitask Language Understanding) ಮಾನದಂಡದಲ್ಲಿ ಮಾನವ ಪರಿಣತಿಯನ್ನು ಮೀರಿಸಿದೆ.
ಇದನ್ನೂ ಓದಿ :100 ಮಿಲಿಯನ್ ದಾಟಿದ ಯೂಟ್ಯೂಬ್ Music & Premium ಚಂದಾದಾರರ ಸಂಖ್ಯೆ