Chandrayaan 4 Mission:ಚಂದ್ರಯಾನ 3ರ ಯಶಸ್ಸಿನ ನಂತರ ಭಾರತದ ಹೆಜ್ಜೆಗಳು ಈಗ ಚಂದ್ರಯಾನ 4ರತ್ತ ಸಾಗುತ್ತಿವೆ. ಬುಧವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಚಂದ್ರಯಾನ 4 ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಸ್ವಾವಲಂಬಿ ಭಾರತಕ್ಕೆ ಇದು ಮತ್ತೊಂದು ದೊಡ್ಡ ಹೆಜ್ಜೆ ಎಂದು ಬಣ್ಣಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ 4ಕ್ಕೆ ವೆಚ್ಚವೆಷ್ಟು?: ಚಂದ್ರಯಾನ 4 ಯೋಜನೆಗೆ 2,104.06 ಕೋಟಿ ರೂ. ಖರ್ಚಾಗಲಿದೆ. 2040ರ ಹೊತ್ತಿಗೆ ಚಂದ್ರನ ಅಂಗಳದಲ್ಲಿ ಗಗನಯಾತ್ರಿಗಳನ್ನು ಇಳಿಸಲು ಇಸ್ರೋ ಯೋಜನೆ ಹಾಕಿಕೊಂಡಿದೆ. 2040ರ ಸುಮಾರಿಗೆ ಭೂಮಿಯಿಂದ ಚಂದ್ರನಿಗೆ, ಚಂದ್ರನಿಂದ ಭೂಮಿಗೆ ಸುಲಭವಾಗಿ ಹೋಗಬಹುದಾಗ ಪರಿಸ್ಥಿತಿ ನಿರ್ಮಾಣವಾಗಬೇಕು ಎಂಬುದು ಇದರ ಗುರಿ.
ಚಂದ್ರಯಾನ 4ರ ಕಾರ್ಯಾಚರಣೆಯಲ್ಲಿ ಎರಡು ವಿಭಿನ್ನ ರಾಕೆಟ್‌ಗಳಾದ ಹೆವಿ-ಲಿಫ್ಟರ್ LVM-3 ಮತ್ತು PSLV ಬಳಸಲಾಗುತ್ತದೆ. ಇವೆರಡೂ ವಿಭಿನ್ನ ಪೇಲೋಡ್‌ಗಳನ್ನು ಹೊತ್ತೊಯ್ಯುತ್ತವೆ.
ಚಂದ್ರಯಾನ 4 ಯೋಜನೆಯ ಕುರಿತು ಮತ್ತಷ್ಟು..:ಚಂದ್ರಯಾನ 4ರ ಗಮನ ಚಂದ್ರನ ಮೇಲೆ ನಿಖರ ಲ್ಯಾಂಡಿಂಗ್, ಮಾದರಿ ಸಂಗ್ರಹಣೆ ಮತ್ತು ಭೂಮಿಗೆ ಸುರಕ್ಷಿತವಾಗಿ ಮರಳುವುದಾಗಿದೆ. ಇದರ ಮೂಲಕ ಭಾರತ ತನ್ನ ಬಾಹ್ಯಾಕಾಶ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದೆ. ಒಟ್ಟು 5 ಮಾಡ್ಯೂಲ್‌ಗಳನ್ನು ತನ್ನೊಂದಿಗೆ ಚಂದ್ರಯಾನ 4 ಹೊತ್ತೊಯ್ಯಲಿದೆ. ಈ ಎಲ್ಲ ಮಾಡ್ಯೂಲ್‌ಗಳು ಒಟ್ಟಾಗಿ ಕೆಲಸ ಮಾಡುತ್ತವೆ ಮತ್ತು ಚಂದ್ರನಿಂದ ಅಗತ್ಯ ಮಾದರಿಗಳನ್ನು ಸಂಗ್ರಹಿಸುತ್ತವೆ. ಇದುವರೆಗೆ ಚೀನಾ ಮತ್ತು ಅಮೆರಿಕ ದೇಶಗಳು ಮಾತ್ರ ಇಂತಹ ಕಠಿಣ ಕಾರ್ಯಾಚರಣೆಯನ್ನು ನಿರ್ವಹಿಸಿವೆ.
ಭಾರತಕ್ಕೆ ಜಪಾನ್ ನೆರವು: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಮಾತನಾಡಿ, "ಚಂದ್ರಯಾನ 4 ಕೇವಲ ಚಂದ್ರನಿಂದ ಕಲ್ಲುಗಳನ್ನು ತರುವ ಮಿಷನ್ ಅಲ್ಲ. ಭವಿಷ್ಯದಲ್ಲಿ ಮನುಷ್ಯರು ಚಂದ್ರನಲ್ಲಿಗೆ ಹೋಗಲು ಮತ್ತು ಅಲ್ಲಿಂದ ಸುರಕ್ಷಿತವಾಗಿ ಹಿಂತಿರುಗಲು ಸಾಧ್ಯವಾಗುವಂತಹ ಸಾಮರ್ಥ್ಯವನ್ನು ರಚಿಸುವುದಾಗಿದೆ" ಎಂದರು.