ಬೆಂಗಳೂರು:ಝೀರೋ ಶಾಡೋ ಡೇ ಅಂಗವಾಗಿ ಇಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆ್ಯಸ್ಟ್ರೋಫಿಸಿಕ್ಸ್ನಲ್ಲಿ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಲೋಹದ ರಾಡ್ನ ನೆರಳನ್ನು ಅಳೆಯುವ ಕಾರ್ಯವನ್ನು ಶಾಲಾ, ಕಾಲೇಜು ವಿದ್ಯಾರ್ಥಿಗಳ ಮುಂದೆಯೇ ಕೈಗೊಳ್ಳಲಾಯಿತು. ಐಐಎ ವಿಜ್ಞಾನ ಸಂವಹನ, ಸಾರ್ವಜನಿಕ ಸಂಪರ್ಕ ಮತ್ತು ಶಿಕ್ಷಣ ವಿಭಾಗ ಈ ಕಾರ್ಯಕ್ರಮ ಆಯೋಜಿಸಿತ್ತು.
ಶೂನ್ಯ ನೆರಳು ದಿನ ಎಂದರೇನು?: ಸೂರ್ಯ ನೇರವಾಗಿ ವ್ಯಕ್ತಿಯ ತಲೆಯ ಮೇಲಿರುವಾಗ ಲಂಬವಾದ ವಸ್ತುವಿನ ನೆರಳು ಅದರಡಿಯಲ್ಲಿ ಬೀಳುತ್ತದೆ. ಆದ್ದರಿಂದ ಮಧ್ಯಾಹ್ನದ ವೇಳೆ ಯಾವುದೇ ನೆರಳು ಕಾಣಿಸುವುದಿಲ್ಲ. ಹಾಗಾಗಿ ಇದನ್ನು 'ಶೂನ್ಯ ನೆರಳು ದಿನ' ಎಂದು ಕರೆಯಲಾಗುತ್ತದೆ.
ಈ ವಿದ್ಯಮಾನವನ್ನು ವೀಕ್ಷಿಸಲು ಐಐಎ ಸಾರ್ವಜನಿಕರನ್ನು ಆಹ್ವಾನಿಸಿತ್ತು. ಸುರಾನಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ 60ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ಕೆಲವು ನಿಮಿಷಗಳಿಗೊಮ್ಮೆ ನೆರಳನ್ನು ಗುರುತಿಸಲು ನಾಲ್ಕು ಗ್ನೋಮನ್‌ಗಳನ್ನು (ಭಾರತೀಯ ಖಗೋಳಶಾಸ್ತ್ರದಲ್ಲಿ ಶಂಕು ಎಂದು ಕರೆಯಲಾಗುವ ನೆಲದ ಮೇಲಿನ ಲಂಬ ಕೋಲುಗಳು) ಸಿದ್ಧವಾಗಿ ಇರಿಸಲಾಗಿತ್ತು. ಇದರ ಜೊತೆಗೆ, ಸಂಸ್ಥೆ ಏರ್ಪಡಿಸಿದ ಪ್ರದರ್ಶನಗಳು ಕೂಡ ಗಮನ ಸೆಳೆದವು.
'ಈಟಿವಿ ಭಾರತ್' ಜೊತೆಗೆ ಮಾತನಾಡಿದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ ಜೌಟ್ರೀಚ್ ಡಿಪಾರ್ಟ್ಮೆಂಟ್ನ ಅಸೋಸಿಯೇಟ್ ವಿಕ್ರಾಂತ್, "ಝೀರೋ ಶಾಡೋ ಕೇವಲ ಕರ್ಕಾಟಕ ಸಂಕ್ರಾಂತಿ (ಟ್ರಾಪಿಕ್ ಆಫ್ ಕ್ಯಾನ್ಸರ್) ಮತ್ತು ಮಕರ ಸಂಕ್ರಾತಿ (ಟ್ರಾಪಿಕ್ ಆಫ್ ಕ್ಯಾಪ್ರಿಕಾರ್ನ್) ರೇಖೆಗಳ ನಡುವಿನ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಬೆಂಗಳೂರು ಮತ್ತು ಅದರ ಅನುಸಾರ 13 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಬರುವ ಚೆನ್ನೈ, ಮಂಗಳೂರು ಸೇರಿದಂತೆ ಹಲವು ಊರುಗಳಲ್ಲಿ ಝೀರೋ ಶಾಡೋ ಡೇ ಕಂಡುಬಂದಿದೆ. ಕೇರಳ ರಾಜ್ಯದಿಂದ ಮಧ್ಯಪ್ರದೇಶದ ಭೂಪಾಲ್‌ವರೆಗೂ ಮಾತ್ರ ಈ ವಿಶೇಷ ದಿನ ಕಂಡು ಬರುತ್ತದೆ" ಎಂದರು.