ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೂದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ರೀತಿಯ ಭಯಾನಕ ಹತ್ಯೆಯ ಘಟನೆಯೊಂದು ನಡೆದಿದೆ. ಮಹಿಳೆಯೋರ್ವಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇದಾಗಿದೆ. ಮಹಾಲಕ್ಷ್ಮೀ (29) ಕೊಲೆಗೀಡಾದ ಮಹಿಳೆ. ಕೊಲೆ ಮಾಡಿದ್ದಲ್ಲದೇ, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟಿರುವುದು ಪತ್ತೆಯಾಗಿದೆ. ವೈಯಾಲಿಕಾವಲ್ನ ಮುನ್ನೇಶ್ವರ ಬ್ಲಾಕ್ನ ಮನೆಯೊಂದರ ಮೊದಲ ಮಹಡಿಯಲ್ಲಿ ಈ ಘಟನೆ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ''ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಮೊದಲ ಮಹಡಿಯಲ್ಲಿ ಮಹಿಳೆಯ ಮೃತದೇಹವನ್ನು ತುಂಡರಿಸಿ ಫ್ರಿಡ್ಜ್ನಲ್ಲಿ ಇಟ್ಟಿರುವ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಸಂಭವಿಸಿ ನಾಲ್ಕೈದು ದಿನಗಳು ಆಗಿರಬಹುದು. ಕೊಲೆಯಾಗಿರುವ ಮಹಿಳೆಯ ಗುರುತು ಪತ್ತೆಯಾಗಿದೆ. ಹೊರರಾಜ್ಯದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಎಫ್ಎಸ್ಎಲ್ ತಂಡ ಕೂಡ ಆಗಮಿಸುತ್ತಿದೆ. ತನಿಖೆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ'' ಎಂದು ಅವರು ಹೇಳಿದರು.
ಮಹಿಳೆ ಇತ್ತೀಚೆಗಷ್ಟೇ ವೈಯಾಲಿಕಾವಲ್ನ ಮನೆಗೆ ಬಂದಿದ್ದಳು. ಇಂದು ಬೆಳಗ್ಗೆ ಆಕೆಯ ತಾಯಿ-ಸಹೋದರಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.