ಚಿಕ್ಕೋಡಿ:ಮದುವೆಗೆ ಒಂದು ದಿನ ಮುನ್ನ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಝುಂಜರವಾಡ ಆರ್ಸಿ ಗ್ರಾಮದ ನಿವಾಸಿ ಸದಾಶಿವ ರಾಮಪ್ಪ ಹೋಸಲ್ಕಾರ (31) ಮೃತಪಟ್ಟಿದ್ದಾರೆ.
ಸೆಪ್ಟೆಂಬರ್ 5ರಂದು ಈ ಯುವಕನ ಮದುವೆ ನಿಶ್ಚಯವಾಗಿತ್ತು. ಕುಟುಂಬ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿಗೆ ಮನೆ ಮುಂದೆ ಮದುವೆಪೂರ್ವ ಸಿದ್ಧತೆ ನಡೆಸಲಾಗುತ್ತಿತ್ತು. ಸದಾಶಿವ ಸ್ನೇಹಿತನ ಜೊತೆಗೆ ಮದುವೆ ಕೆಲಸದ ಬಗ್ಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಹಠಾತ್ ಹೃದಯಾಘಾತ ಸಂಭವಿಸಿದ್ದು, ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಅಷ್ಟರಲ್ಲೇ ಯುವಕನ ಪ್ರಾಣಪಕ್ಷಿ ಹಾರಿ ಹೋಗಿದೆ.