ಮೈಸೂರು:ತಾಯಿಯನ್ನು ಕೊಲೆ ಮಾಡುವುದಾಗಿ ಹೆದರಿಸಿ, ಅಪ್ರಾಪ್ತೆ ಮೇಲೆ ಕಳೆದ 6 ತಿಂಗಳುಗಳಿಂದ ಹಲವು ಸಲ ಅತ್ಯಾಚಾರವೆಸಗಿ, ಆಕೆಯ ಅಶ್ಲೀಲ ಫೋಟೋಗಳನ್ನು ವೈರಲ್ ಮಾಡಿದ ಆರೋಪಿ ಯುವಕನನ್ನು ನಂಜನಗೂಡು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡು ಪಟ್ಟಣದ 20 ವರ್ಷದ ಯುವಕನೇ ಬಂಧಿತ ಆರೋಪಿ. ಈತ 15 ವರ್ಷದ ಅಪ್ರಾಪ್ತೆಗೆ ಬೆದರಿಕೆ ಹಾಕಿ, ಅತ್ಯಾಚಾರ ಎಸಗಿದ್ದಲ್ಲದೆ, ನಗ್ನ ಫೋಟೋಗಳನ್ನು ಬಾಲಕಿಯು ಓದುತ್ತಿರುವ ಶಾಲಾ ಪ್ರಾಂಶುಪಾಲರಿಗೆ ಕಳಿಸಿದ್ದ.
10ನೇ ತರಗತಿ ಓದುತ್ತಿರುವ ಬಾಲಕಿಯ ಹಿಂದೆ ಬೈಕ್ನಲ್ಲಿ ಫಾಲೋ ಮಾಡುತ್ತಿದ್ದ ಆರೋಪಿ, ಆಕೆಯನ್ನು ಒಲೈಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಆದರೆ, ಸ್ಪಂದಿಸಿರಲಿಲ್ಲ. ಅಲ್ಲದೆ, ಬೈಕ್ನಲ್ಲಿ ಬಾಲಕಿ ಮನೆಯ ಹತ್ತಿರ ಸಂಚರಿಸುವಾಗಿ ಜೋರಾಗಿ ಎಕ್ಸ್ಲೇಟರ್ ಕೊಡುವುದು, ಬಾಲಕಿಗೆ ತನ್ನೊಂದಿಗೆ ಬರುವಂತೆ ಸನ್ನೆ ಮಾಡುತ್ತಿದ್ದ. ಈ ಬಗ್ಗೆ ಬುದ್ದಿಮಾತು ಹೇಳಿದರೂ ಕೇಳದೇ, ಅದೇ ಚಾಳಿ ಮುಂದುವರೆಸಿದ್ದ. ಹೀಗಾಗಿ, ಬಾಲಕಿಯ ಮನೆಯವರು ಬೇರೆ ಕಡೆ ರೂಮ್ ಮಾಡಿಕೊಂಡು ವಾಸಿಸುತ್ತಿದ್ದರು. ಆದರೂ ಕೂಡ ಯುವಕ ಬಾಲಕಿಗೆ ಕಾಟ ಕೊಡುವುದನ್ನು ನಿಲ್ಲಿಸಿರಲಿಲ್ಲ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ, ಕಳೆದ ಫೆಬ್ರವರಿ 13ರಂದು ಬಾಲಕಿಯನ್ನು ಹಿಂಬಾಲಿಸಿದ ಆರೋಪಿ, ತಾನು ಹೇಳಿದಂತೆ ಕೇಳದಿದ್ದರೆ ನಿನ್ನ ತಾಯಿಯನ್ನು ಸಾಯಿಸುತ್ತೇನೆ ಎಂದು ಹೆದರಿಸಿದ್ದಾನೆ. ಆಗ ಭಯಗೊಂಡ ಬಾಲಕಿ ಆತ ಕರೆದೆಡೆಗೆ ಹೋಗಿದ್ದಾಳೆ. ಬಳಿಕ ಅವಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೆ, ತನ್ನೊಂದಿಗಿನ ಅಶ್ಲೀಲ ಫೋಟೋಗಳನ್ನು ಸೆರೆಹಿಡಿಕೊಂಡಿದ್ದಾನೆ. ಬಳಿಕ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ, ಕಳೆದ ಆರು ತಿಂಗಳಲ್ಲಿ ಏಳೆಂಟು ಸಲ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ಆರೋಪಿಯು ಅಪ್ರಾಪ್ತೆಯ ಅಶ್ಲೀಲ ಫೋಟೋಗಳನ್ನು ಶಾಲಾ ಪ್ರಾಂಶುಪಾಲರಿಗೆ ಕಳಿಸಿದ್ದಾನೆ. ತದನಂತರ, ಆಗಸ್ಟ್ 14ರಂದು ಪ್ರಾಂಶುಪಾಲರು ಬಾಲಕಿಯ ತಾಯಿಯನ್ನು ಕರೆಯಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಗ, ತಾಯಿಯು ತನ್ನ ಮಗಳನ್ನು ವಿಚಾರಿಸಿದಾಗ ಯುವಕನ ನಿರಂತರ ಕೃತ್ಯದ ಬಗ್ಗೆ ವಿವರಿಸಿದ್ದಾಳೆ. ತಾನು ಭಯಗೊಂಡು ಯಾರಿಗೂ ತಿಳಿಸಿರಲಿಲ್ಲ ಎಂದು ಅಪ್ರಾಪ್ತೆಯು ತಾಯಿಗೆ ತಿಳಿಸಿದ್ದಾಳೆ. ಮಗಳನ್ನು ಲೈಂಗಿಕವಾಗಿ ಬಳಸಿಕೊಂಡು, ಫೋಟೋಗಳನ್ನು ಶೇರ್ ಮಾಡಿದ ಯುವಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಾಯಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪಟ್ಟಣ ಪೊಲೀಸರು ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ತಂದೆ-ತಾಯಿ ಸಾವು, ಮನೆಯಿಂದ ಹೊರ ಹಾಕಿದ ಕುಟುಂಬ: ಬಾಲಕಿ ಮೇಲೆ ಬಸ್ನಲ್ಲಿ ಐವರಿಂದ ಸಾಮೂಹಿಕ ಅತ್ಯಾಚಾರ - GANG RAPE IN BUS