ಬೆಂಗಳೂರು:ಹೊಸ ಸಂವತ್ಸರಕ್ಕೆ ದಿನಗಣನೆ ಶುರುವಾಗಿದೆ. ಕೆಲವೇ ದಿನಗಳಲ್ಲಿ 2025ನೇ ಹೊಸ ವರ್ಷ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ 2024ರಲ್ಲಿ ಭೂಕುಸಿತ, ಪ್ರಾಕೃತಿಕ ವಿಕೋಪ, ಸರಣಿ ಬಾಣಂತಿಯರ ಸಾವು ಪ್ರಕರಣ ಸೇರಿದಂತೆ ಹಲವು ಪ್ರಮುಖ ಘಟನಾವಳಿಗಳು ನಡೆದಿವೆ.
ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಬಂದರೆ ಸಾಕು ಕರಾವಳಿ ಮತ್ತು ಪಶ್ಚಿಮ ಘಟ್ಟಗಳು ಭಾರೀ ಪ್ರಾಕೃತಿಕ ವಿಕೋಪಕ್ಕೆ ಸಾಕ್ಷಿಯಾಗುತ್ತಿವೆ. ಬಹುತೇಕ ಎಲ್ಲ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತವೆ. ಬಯಲು ಪ್ರದೇಶಗಳು ಪ್ರವಾಹಕ್ಕೆ ಸಾಕ್ಷಿಯಾದರೆ, ಕರಾವಳಿ ಪ್ರದೇಶಗಳು ಹೆಚ್ಚುತ್ತಿರುವ ಸಮುದ್ರದ ಸವೆತ ಹಾಗೂ ಘಟ್ಟ ಪ್ರದೇಶಗಳು ಭೂಕುಸಿತಕ್ಕೆ ಒಳಗಾಗುವುದನ್ನು ಈ ವರ್ಷದಲ್ಲಿ ನೋಡಿದ್ದೇವೆ.
ಶಿರೂರು ದುರಂತ:2024ರ ಜುಲೈನಲ್ಲಿ ಉತ್ತರ ಕನ್ನಡದ ಅಂಕೋಲಾದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ಈ ವರ್ಷದ ಅತ್ಯಂತ ತೀವ್ರವಾದ ವಿಪತ್ತು. ಭಾರಿ ಗುಡ್ಡ ಕುಸಿತದಿಂದಾಗ ಹೆದ್ದಾರಿ ಬಳಿ ನಿಲ್ಲಿಸಿದ್ದ ವಾಹನಗಳೂ ಕೊಚ್ಚಿಕೊಂಡು ಹೋಗಿದ್ದಲ್ಲದೆ, ಪಕ್ಕದ ಹೋಟೆಲ್ನಲ್ಲಿದ್ದವರು ಸೇರಿ 11 ಜನರು ಕಣ್ಮರೆಯಾಗಿದ್ದರು. ಘಟನೆಯಲ್ಲಿ ಒಂದೆರಡು ಟ್ರಕ್‌ಗಳು ಮಣ್ಣಿನ ಜೊತೆಗೆ ಗಂಗಾವಳಿ ನದಿಯಲ್ಲಿ ತೇಲಿಹೋಗಿದ್ದವು. 8 ಮಂದಿಯ ಶವಗಳು ಪತ್ತೆಯಾಗಿದ್ದು, ಮೂವರ ಸುಳಿವು ಸಿಗಲೇ ಇಲ್ಲ.
ಟಿಬಿ ಡ್ಯಾಂ ಕ್ರಸ್ಟ್‌ಗೇಟ್ ಚೈನ್ ಲಿಂಕ್ ಕಟ್:ಆಗಸ್ಟ್ 10ರಂದು ರಾತ್ರಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಚ್ಚಿಹೋದ ದುರಂತ ಸರ್ಕಾರವನ್ನು ತಬ್ಬಿಬ್ಬುಗೊಳಿಸಿತ್ತು. ಟಿಬಿ ಡ್ಯಾಂ ವ್ಯಾಪ್ತಿಯ ರೈತರನ್ನು ಚಿಂತೆಗೀಡು ಮಾಡಿಸಿತ್ತು. ಆದರೆ, ಸರ್ಕಾರ ತಾತ್ಕಾಲಿಕವಾಗಿ ಚೈನ್ ಲಿಂಕ್ ಅಳವಡಿಸಿ, ಕ್ರಸ್ಟ್ ಗೇಟ್ ರಿಪೇರಿ ಮಾಡಿ ಹೆಚ್ಚಿನ ನೀರು ಪೋಲಾಗದಂತೆ ತಡೆಯಿತು. ಜೊತೆಗೆ ರೈತರಿಗೆ ನೀರು ಕೊಡುವಲ್ಲಿ ಯಶಸ್ವಿಯಾಯಿತು. ನಂತರ ಮತ್ತೆ ಟಿಬಿ ಡ್ಯಾಂ ಭರ್ತಿಯಾಗಿದೆ. ಆದರೆ, ದುರ್ಬಲವಾಗಿರುವ ಎಲ್ಲಾ ಗೇಟ್‌ಗಳ ಬದಲಾವಣೆಗೆ ಚಿಂತಿಸಲಾಗಿದೆ. ಇದೇ ವಿಚಾರಕ್ಕೆ ಸರ್ಕಾರದ ಮೇಲೆ ಪ್ರತಿಪಕ್ಷಗಳು ವಾಗ್ದಾಳಿಯನ್ನೂ ಮಾಡಿದ್ದವು.
ಮುಡಾ ಹಗರಣ:ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ಅಕ್ರಮವಾಗಿ ಮುಡಾ ನಿವೇಶನ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರವನ್ನು ಪ್ರತಿಪಕ್ಷಗಳು ಇಕ್ಕಟ್ಟಿಗೆ ಸಿಲುಕಿಸಿದವು. ಅಲ್ಲದೇ ಪರಿಹಾರ 62 ಕೋಟಿ ಆಗುತ್ತದೆ. ಅದನ್ನು ಕೊಟ್ಟು ಬಿಡಲಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಯಿತು. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದರಿಂದ, ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಪ್ರಸ್ತುತ ವಿಚಾರಣೆ ಜಾರಿಯಲ್ಲಿದ್ದು, ಬಿಜೆಪಿಯು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ತನಿಖೆ ಎದುರಿಸುತ್ತಿದ್ದು, ರಾಜೀನಾಮೆ ಕೊಡುವುದಿಲ್ಲ ಎಂದಿದ್ದಾರೆ. ಅಲ್ಲದೇ ಈ ನಡುವೆಯೂ ಕಾಂಗ್ರೆಸ್ ಪಕ್ಷ ರಾಜ್ಯದ ಮೂರೂ ಉಪಚುನಾವಣೆಗಳನ್ನು ಗೆದ್ದು ಬೀಗಿತು. ಉಪ ಚುನಾವಣೆ ಸೋಲಿನಿಂದ ವಿಪಕ್ಷಗಳು ಸ್ವಲ್ಪ ತಣ್ಣಗಾಗಿರುವಂತೆ ಕಂಡು ಬಂದಿದ್ದು, ಇದು ಸಿಎಂ ಹಾಗೂ ಸರ್ಕಾರಕ್ಕೆ ಪ್ಲಸ್ ಆಗಿದೆ.
ಎತ್ತಿನಹೊಳೆ ಯೋಜನೆ ಮೊದಲ ಹಂತ ಉದ್ಘಾಟನೆ:ಕರ್ನಾಟಕದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆಯ ಮೊದಲ ಹಂತದ ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೆಪ್ಟೆಂಬರ್ 6ರಂದು ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4ರಲ್ಲಿ ಉದ್ಘಾಟಿಸಿದರು. ಎತ್ತಿನಹೊಳೆ ಯೋಜನೆ ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆಯ ಕಾಮಗಾರಿಗೆ ವೇಗ ನೀಡಿತ್ತು.
ತೀವ್ರ ಸ್ವರೂಪ ಪಡೆದ ವಕ್ಫ್ ಬೋರ್ಡ್ ನೋಟಿಸ್ ವಿವಾದ:ರಾಜ್ಯದಲ್ಲಿ ವಕ್ಫ್ ಬೋರ್ಡ್ ಆಸ್ತಿ ವಿವಾದ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ರೈತರ ಪಹಣಿಯಲ್ಲೂ ವಕ್ಫ್ ಜಮೀನು ಎಂದು ಬದಲಾವಣೆ ಆಗಿರುವುದು ರೈತರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ವಿಜಯಪುರದಲ್ಲಿ ರೈತರಿಗೆ ವಕ್ಫ್ ನೋಟಿಸ್ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ವಕ್ಫ್ ವಿವಾದ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ನಡುವೆ ಎಚ್ಚೆತ್ತುಕೊಂಡ ಸರ್ಕಾರ ರೈತರಿಗೆ ನೀಡಿದ್ದ ನೋಟಿಸ್ ವಾಪಸ್ ಪಡೆದುಕೊಂಡಿತು. ನವೆಂಬರ್ 2ರಂದು ವಕ್ಫ್ ಆಸ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗಿರುವ ನೋಟಿಸ್ಗಳನ್ನು ತಕ್ಷಣ ವಾಪಸ್ ಪಡೆಯಲು ಸಿಎಂ ಸಿದ್ದರಾಮಯ್ಯ ಆದೇಶ ನೀಡಿದರು. ಸದ್ಯಕ್ಕೆ ವಕ್ಫ್ ಆಸ್ತಿ ವಿವಾದ ತಟಸ್ಥವಾಗಿದೆ.