ಕರ್ನಾಟಕ

karnataka

ETV Bharat / state

WATCH... ಚೆನ್ನಮ್ಮನ ನೆಲದಲ್ಲಿ ವೀರರಾಣಿಯರಿಂದ ಬೈಕ್ ರ್‍ಯಾಲಿ - WOMENS BIKE RALLY

200ನೇ ಚೆನ್ನಮ್ಮ ವಿಜಯೋತ್ಸವ ಹಿನ್ನೆಲೆ ಬೆಳಗಾವಿಯಲ್ಲಿ ನಿನ್ನೆ ಮೊದಲ ಬಾರಿಗೆ ಮಹಿಳೆಯರ ಬೈಕ್‌ ರ್‍ಯಾಲಿ ನಡೆದಿದೆ.

ಮಹಿಳೆಯರ ಬೈಕ್‌ ರ್‍ಯಾಲಿ
ಮಹಿಳೆಯರ ಬೈಕ್‌ ರ್‍ಯಾಲಿ (ETV Bharat)

By ETV Bharat Karnataka Team

Published : Oct 21, 2024, 7:52 AM IST

ಬೆಳಗಾವಿ: 'ಕಿತ್ತೂರ ನಾಡು' ಈಗ ಸಂಭ್ರಮದ ಹೊನಲಿನಲ್ಲಿದೆ. ಉತ್ಸವದ ದ್ವಿಶತಮಾನೋತ್ಸವ ಆಚರಣೆಗಾಗಿ 'ಕ್ರಾಂತಿಯ ನೆಲ' ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಇದರ ಪ್ರಯುಕ್ತ ಕಿತ್ತೂರಿನಲ್ಲಿ ಇದೇ ಮೊದಲ ಬಾರಿ ನಡೆದ ಮಹಿಳೆಯರ ಬೈಕ್‌ ರ್‍ಯಾಲಿ ಕಣ್ಮನಸೆಳೆಯಿತು. ಮನೆಯಿಂದ ಹೊರಬಂದು ಉತ್ಸಾಹದಿಂದ ಬೈಕ್‌ ಏರಿದ ನಾರಿಯರು, ರಣೋತ್ಸಾಹದ ಕಹಳೆ ಊದಿದರು.

ಬ್ರಿಟಿಷರ ವಿರುದ್ಧ ಕಿತ್ತೂರು ಸಂಸ್ಥಾನವು ದಿಗ್ವಿಜಯ ಸಾಧಿಸಿದ ಘಳಿಗೆಗೆ ಈಗ 200 ವಸಂತ ತುಂಬಿದೆ. ಇದರ ಸವಿನೆನಪಿಗಾಗಿ ಅ.23ರಿಂದ 25ರವರೆಗೆ ಮೂರು ದಿನ ವೈಭವದಿಂದ ನೆರವೇರುತ್ತಿರುವ ಉತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ಬೈಕ್ ರ್‍ಯಾಲಿ ಆಕರ್ಷಿಸಿತು.

ಮಹಿಳೆಯರ ಬೈಕ್‌ ರ್‍ಯಾಲಿ (ETV Bharat)

ಬಗೆಬಗೆಯ ವಿನ್ಯಾಸಗಳ ಸೀರೆ ತೊಟ್ಟು, ತಲೆಗೆ ಕೇಸರಿ ಪೇಟಾ ಸುತ್ತಿಕೊಂಡು ಧೈರ್ಯದ ಖಣಿಗಳಂತೆ ರಸ್ತೆಗಿಳಿದಿದ್ದ ನಾರಿಯರು, ಹುಮ್ಮಸ್ಸಿನಿಂದ ರಸ್ತೆಯ ಬೀದಿ ಬೀದಿಗಳಲ್ಲಿ ಬೈಕ್‌ಗಳನ್ನು ಓಡಿಸಿದರು. ಕೆಲವರು ಬುಲೆಟ್‌ ಸವಾರಿಯನ್ನೂ ಮಾಡಿ ಗಮನಸೆಳೆದರು. ಚೆನ್ನಮ್ಮನ ಇತಿಹಾಸವನ್ನೂ ನಾಡಿನ ಜನತೆಗೆ ಪರಿಚಯಿಸಿದರು. ಕೆಲವರು ಕಚ್ಚೆ ಹಾಕಿಕೊಂಡೇ ಬೈಕ್‌ ಓಡಿಸಿದ್ದು ಇನ್ನೊಂದು ವಿಶೇಷವಾಗಿತ್ತು.

ತಾಲೂಕಿನ ಹೂಲಿಕಟ್ಟಿಯ ಅಬ್ದುಲ್ ಕಲಾಮ್‌ ಆಜಾದ್‌ ವಸತಿ ಶಾಲೆಯಿಂದ ಆರಂಭಗೊಂಡ ಬೈಕ್ ರ್‍ಯಾಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ, ಕಿತ್ತೂರು ಕೋಟೆ ಆವರಣ ಪ್ರವೇಶಿಸಿತು. ಚೆನ್ನಮ್ಮನ ಪರ ಜೈಕಾರ ಕೂಗುತ್ತಾ ಬೈಕ್ ಓಡಿಸುತ್ತಿದ್ದ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸಿತು. ಉತ್ಸವಕ್ಕೆ ಮತ್ತಷ್ಟು ಹುರುಪು - ಹುಮ್ಮಸ್ಸು ತಂದು ಕೊಟ್ಟಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ರ‍್ಯಾಲಿಯನ್ನು ರಸ್ತೆ ತುಂಬಾ ನಿಂತು ಜನ ಕಣ್ತುಂಬಿಕೊಂಡರು.

ಮಹಿಳೆಯರ ಬೈಕ್‌ ರ್‍ಯಾಲಿ (ETV Bharat)

ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, "ರಾಣಿ ಚೆನ್ನಮ್ಮ ನಮಗೆಲ್ಲ ಸ್ಫೂರ್ತಿಯ ಸೆಲೆ. 200ನೇ ವಿಜಯೋತ್ಸವ ಹಿನ್ನೆಲೆಯಲ್ಲಿ ಉತ್ಸವಕ್ಕೆ ಮೆರಗು ತರಬೇಕೆಂದು ಆಯೋಜಿಸಿದ್ದ ಬೈಕ್ ರ್‍ಯಾಲಿಯಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಉತ್ಸಾಹದಿಂದ ಭಾಗಿಯಾಗಿದ್ದಾರೆ. ಮೂರು ದಿನ ಉತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯಾ ಬಾಪಟ್‌, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ ಸೇರಿ ನೂರಾರು ಮಹಿಳೆಯರು ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:200ನೇ ವಿಜಯೋತ್ಸವ ಸವಿನೆನಪಿಗೋಸ್ಕರ ವೀರರಾಣಿ ಚೆನ್ನಮ್ಮನ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಹೋರಾಟಗಾರರ ಆಗ್ರಹ

ಇದನ್ನೂ ಓದಿ:ಅ.23ರಿಂದ 25ರವರೆಗೆ ಅದ್ಧೂರಿ ಕಿತ್ತೂರು ಉತ್ಸವ: ಶಾಸಕ ಬಾಬಾಸಾಹೇಬ

ABOUT THE AUTHOR

...view details