ಹಾಸನ (ಬೇಲೂರು): ಕಟಾವಿಗೆ ಬಂದಿರುವ ಭತ್ತದ ಬೆಳೆಗಳನ್ನ ಕಾಡಾನೆಗಳ ಹಿಂಡು ತುಳಿದು ನಾಶಪಡಿಸಿರುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಮಲಸಾವರ ಹಾಗೂ ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶನಿವಾರ ರಾತ್ರಿ ನಡೆದಿದೆ.
22 ಕಾಡಾನೆಗಳು ಚಿಕ್ಕ ಸಾಲಾವರ (ಬಾವಿಕಟ್ಟೆ) ಗ್ರಾಮದ ಹರೀಶ್, ಶಾಂತಪ್ಪ, ಅಶೋಕ, ಉಪೇಂದ್ರ ಅವರಿಗೆ ಸೇರಿದ ಭತ್ತದ ಪೈರನ್ನು ನಾಶಪಡಿಸಿ ಮಂಜುನಾಥ್ ಎಂಬುವರಿಗೆ ಸೇರಿದ ತೆಂಗಿನ ಮರಗಳನ್ನು ಮುರಿದಿವೆ. ಬಾವಿಕಟ್ಟೆ ಗ್ರಾಮದ ಸುಶೀಲಮ್ಮ ಎಂಬ ರೈತ ಮಹಿಳೆ ಕಟಾವು ಮಾಡಿ ಒಕ್ಕುವ ಸಲುವಾಗಿ ರಾಶಿ ಹಾಕಿದ್ದ ಭತ್ತವನ್ನು ತುಳಿದು ಹಾಳುಮಾಡಿವೆ.
ಅನುಘಟ್ಟ ಗ್ರಾಮದ ಎ. ಎನ್ ನಾಗರಾಜು ಎಂಬುವರಿಗೆ ಸೇರಿದ 1 ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಬೆಳೆ ಭುವನೇಶ್ವರಿ ಗುಂಪಿನ ಕಾಡಾನೆಗಳ ಸಂಚಾರದಿಂದ ಧ್ವಂಸವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡಲಿದ್ದ ಬೆಳೆಯನ್ನು ಕಾಡಾನೆಗಳು ನಾಶಪಡಿಸಿರುವುದರಿಂದಾಗಿ ಹಲವು ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ.
ಬೇಲೂರು ತಾಲೂಕಿನಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಈಗಾಗಾಲೇ ಆನೆಗಳಿಗೆ ರೇಡಿಯೋ ಕಾಲರ್ ಹಾಕುವ ಕಾರ್ಯವನ್ನು ಜಿಲ್ಲಾಡಳಿತ ಮಾಡಿದೆ. ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಮಲಸಾವರ ಹಾಗೂ ಅನುಘಟ್ಟ ಗ್ರಾ. ಪಂ ವ್ಯಾಪ್ತಿಯ ಗ್ರಾಮಗಳ ಸುತ್ತಮುತ್ತ ಕಾಡಾನೆಗಳು ಬೀಡುಬಿಟ್ಟಿದ್ದು, ಸುಮಾರು 30ಕ್ಕೂ ಹೆಚ್ಚು ಆನೆಗಳ ಗುಂಪು ಹಿಂಡು ಹಿಂಡಾಗಿ ಬರುತ್ತಿವೆ. ರೈತರಿಗೆ ತಾವು ಬೆಳೆದ ಬೆಳಗಳನ್ನು ರಕ್ಷಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಸರ್ಕಾರ ಕೂಡಲೇ ಆನೆಗಳ ಸ್ಥಳಾಂತರ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ :ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿಆಹಾರ ಅರಸಿ ಬಂದ ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.