ಮೈಸೂರು: ಸೆರೆ ಸಿಗುವ ಮುನ್ನ ಗದ್ದೆಗಳಲ್ಲಿ ಭತ್ತ, ಕಬ್ಬನ್ನು ತಿಂದು ಹೋಗುತ್ತಿದ್ದರೂ, ಯಾರಿಗೂ ತೊಂದರೆ ಉಂಟು ಮಾಡದೇ ಶಾಂತ ರೀತಿಯಲ್ಲಿ ಇರುತ್ತಿದ್ದ ಕಾಡಾನೆ ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿದೆ. ಏಕಲವ್ಯನಾಗಿ ದಸರಾ ಜಂಬೂ ಸವಾರಿಯಲ್ಲಿ ಈ ಆನೆ ಮೆರವಣಿಗೆಯಲ್ಲಿ ಭಾಗವಹಿಸಲಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗರೆಯಲ್ಲಿ ಯಾರಿಗೂ ತೊಂದರೆ ಕೊಡದೇ ತನಗೆ ಇಷ್ಟವಾದ ಭತ್ತ, ಕಬ್ಬು ತಿಂದು ಹೋಗುತ್ತಿದ್ದ ಕಾಡಾನೆಯನ್ನು 2022ರಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿಯಿತು. ಸೆರೆ ಸಿಕ್ಕ ಬಳಿಕವೂ ಎಲ್ಲ ಕಾಡಾನೆಗಳಂತೆ ಉಗ್ರವಾಗಿ ವರ್ತಿಸದೇ ಪಳಗಿದ ಆನೆಯಂತೆ ಇದ್ದದ್ದನ್ನು ಗಮನಿಸಿದ ಅರಣ್ಯ ಇಲಾಖೆಯವರು ದ್ರೋಣಚಾರ್ಯರನ್ನು ದೂರದಿಂದಲೇ ನೋಡಿ ಕಲಿತು ಮಹಾ ಬಿಲ್ಲುಗಾರನಾದ ಏಕಲವ್ಯನ ಹೆಸರನ್ನು ಈ ಆನೆಗೆ ನಾಮಕರಣ ಮಾಡಿದರು.
ನಂತರ ಸಾಕಾನೆಗಳಿಂದ ನೀತಿ - ಪಾಠಗಳನ್ನು ಮಾಡಿಸಿದ ನಂತರ ಮತ್ತೀಗೊಡು ಶಿಬಿರದ ಏಕಲವ್ಯ ಮೈಸೂರಿಗೆ ಹೆಜ್ಜೆ ಹಾಕಿದ್ದಾನೆ. ಶಾಂತ ಸ್ವಭಾವವನ್ನು ಮುಂದುವರಿಸಿದ್ದರಿಂದ ಸೆರೆ ಸಿಕ್ಕ ಎರಡೇ ವರ್ಷಗಳಲ್ಲಿ ಏಕಲವ್ಯನನ್ನು ದಸರಾ ಮಹೋತ್ಸವಕ್ಕೆ ಕರೆದುಕೊಂಡು ಬರಲಾಗಿದೆ. ಜಂಬೂ ಸವಾರಿಗೆ ಅರ್ಹತೆ ಗಿಟ್ಟಿಸಿದ್ದಾನೆ ಎಂದ ಮೇಲೆ ಆತನ ಗುಣ - ನಡವಳಿಕೆ ಎಷ್ಟರ ಮಟ್ಟಿಗೆ ಸಭ್ಯವಾಗಿರಬೇಕು ಎನ್ನುವುದು ಸರಳವಾಗಿಯೇ ಅರ್ಥವಾಗುತ್ತದೆ.
ಎಲ್ಲ ಆದೇಶ ಪಾಲನೆ ಮಾಡುತ್ತಿರುವ ಏಕಲವ್ಯ:ಅರಣ್ಯ ಇಲಾಖೆಯ ಅಕಾರಿಗಳ ಪ್ರಕಾರ, ಏಕಲವ್ಯ ತನ್ನ ಮಾವುತ ಹೇಳಿದ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಾನೆ. ಮಾತನ್ನು ಮೀರುವುದಿಲ್ಲ. ಸುಖಾಸುಮ್ಮನೆ ಬೇರೆ ಆನೆಗಳ ತಂಟೆಗೆ ಹೋಗಿ, ಕೀಟಲೆ ಮಾಡುವುದಿಲ್ಲ. ಜಗಳ ಕಾಯುವುದೂ ಇಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎನ್ನುತ್ತಾ ಕಾಲ ದೂಡುತ್ತಾನೆ. ಇದಲ್ಲದೇ ಈಗ ಏಕಲವ್ಯನಿಗೆ 39 ವರ್ಷ ಪ್ರಾಯ. ಈಗಲೇ ಮೈ-ಮಾಟ ಹೇಳಿ ಮಾಡಿಸಿದಂತೆ ಇದೆ. ಇನ್ನೂ ಐದಾರು ವರ್ಷ ಹೋದರೆ ದೇಹ ಇನ್ನಷ್ಟು ಆಕರ್ಷಣೀಯವಾಗುತ್ತದೆ.
ಕಂಜನ್ , ಏಕಲವ್ಯನಿಗೆ ಇದು ಮೊದಲ ದಸರಾ:ಅಭಿಮನ್ಯು, ಲಕ್ಷ್ಮಿ, ವರಲಕ್ಷ್ಮೀ, ಧನಂಜಯ, ಭೀಮ, ಗೋಪಿ, ರೋಹಿತ್ ಆನೆಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರೂ, ಕಂಜನ್ ಹಾಗೂ ಏಕಲವ್ಯನಿಗೆ ಇದೇ ಮೊದಲ ದಸರಾ.
ಮುಂದೊಂದು ದಿನ ಚಿನ್ನದ ಅಂಬಾರಿ ಈತನ ಬೆನ್ನು ಏರುವುದು ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನೇನೂ ಅಭಿಮನ್ಯುವಿಗೂ 58 ವರ್ಷ ಆಯಿತು. ಇನ್ನು ಎರಡು ದಸರೆಯಲ್ಲಿ ಅಂಬಾರಿ ಹೊತ್ತು ಸಾಗಬಹುದು. ಅಮೇಲೆ ನಿವೃತ್ತಿ ತಗೆದುಕೊಳ್ಳಲೇಬೇಕು. ಅಷ್ಟರಲ್ಲಿ ಹೊಸ ನಾಯಕನನ್ನು ತಯಾರಿ ಮಾಡಬೇಕಾದ ಜವಾಬ್ದಾರಿ ಅರಣ್ಯ ಇಲಾಖೆಗೆ ಇದೆ. ಈಗ ಏಕಲವ್ಯನ ಉಪಸ್ಥಿತಿಯಿಂದ ಆಯ್ಕೆಗಳು ಲಭ್ಯವಿವೆ.
ಇದನ್ನೂ ಓದಿ:ದಸರಾ ಗಜಪಡೆಯ ತೂಕ ಪರೀಕ್ಷೆ: ಅಂಬಾರಿ ಹೊರುವ ಅಭಿಮನ್ಯು ಬಲಾಢ್ಯ, ಯಾವ ಆನೆ ಭಾರ ಎಷ್ಟು? - Dasara Gajapade weight test