ಹುಬ್ಬಳ್ಳಿ:ಈ ಬಾರಿಯಧಾರವಾಡ ಲೋಕಸಭಾ ಚುನಾವಣೆಯಲ್ಲಿ ಯಾರೇ ಗೆದ್ದರೂ ಅದು ದಾಖಲೆಯ ಪುಟಕ್ಕೆ ಸೇರಲಿದೆ. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರಿಗೆ ಇದು ಮೊದಲ ಚುನಾವಣೆಯಾದರೆ, ಬಿಜೆಪಿಯ ಪ್ರಲ್ಹಾದ್ ಜೋಶಿ 5ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಗೆಲವಿನ ದಾಖಲೆ ಬರೆಯಲು ಬಿಜೆಪಿ ಸಜ್ಜಾಗಿದೆ.
ಇದೇ ಕ್ಷೇತ್ರದಿಂದ ಈ ಹಿಂದೆ (ವಿಂಗಡಣೆಗೂ ಮುನ್ನ) ಸತತ 4 ಬಾರಿ ಸಂಸದರಾಗಿ ಆಯ್ಕೆಯಾದ ಸರೋಜಿನಿ ಮಹಿಷಿ ಮತ್ತು ಡಿ. ಕೆ. ನಾಯ್ಕರ್ ಅವರ ದಾಖಲೆ ಮುರಿಯುವ ತವಕದಲ್ಲಿ ಪ್ರಲ್ಹಾದ್ ಜೋಶಿ ಇದ್ದರೆ, ಮೊದಲ ಸಲ ಕಣಕ್ಕಿಳಿದಿರುವ ವಿನೋದ ಅಸೂಟಿ ಗೆದ್ದು ತಮ್ಮ ಹೆಸರನ್ನು ರಾಜಕೀಯ ಪುಟದಲ್ಲಿ ಸೇರಿಸುವ ಉತ್ಸಾಹದಲ್ಲಿದ್ದಾರೆ.
ಕುಟುಂಬದ ಸದಸ್ಯರೊಂದಿಗೆ ಪ್ರಹ್ಲಾದ್ ಜೋಶಿ (ETV Bharat) 72 ವರ್ಷಗಳಲ್ಲಿ ಕೇವಲ 5 ಸಂಸದರ ಆಯ್ಕೆ:ಧಾರವಾಡ ಲೋಕಸಭಾ ಕ್ಷೇತ್ರ ಈ ಹಿಂದೆ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರವಾಗಿತ್ತು. 2008ರಲ್ಲಿ ಧಾರವಾಡ ಕ್ಷೇತ್ರವಾಗಿ ಹೊರಹೊಮ್ಮಿದೆ. 1952ರಿಂದ 2019ರ ವರೆಗೆ ಒಟ್ಟು 17 ಲೋಕಸಭಾ ಚುನಾವಣೆಗಳು ನಡೆದಿದ್ದು, ಇದರಲ್ಲಿ 1952 ರಿಂದ 1991ರ ವರೆಗೆ ಸತತ 10 ಬಾರಿ ಕಾಂಗ್ರೆಸ್ ಗೆದ್ದಿದೆ. 1996ರಲ್ಲಿ ಕಾಂಗ್ರೆಸ್ನಿಂದ ಕ್ಷೇತ್ರ ಕಿತ್ತುಕೊಂಡ ಬಿಜೆಪಿ 2019ರ ವರೆಗೆ ಸತತವಾಗಿ 7 ಬಾರಿ ಗೆಲುವು ಸಾಧಿಸುತ್ತಲೇ ಬಂದಿದೆ. ಈ ಕ್ಷೇತ್ರದ ವಿಶೇಷವೆಂದರೆ ಲೋಕಸಭಾ ಚುನಾವಣೆಯ 72 ವರ್ಷಗಳಲ್ಲಿ ಇದುವರೆಗೆ ಸಂಸದರಾದವರು ಕೇವಲ ಐವರು ಮಾತ್ರ. ಇನ್ನು ಈ ಕ್ಷೇತ್ರದಲ್ಲಿ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಉದಾಹರಣೆಗಳಿಲ್ಲ. ಹಾಗಾಗಿ ಈ ಬಾರಿ ಯಾರೇ ಗೆದ್ದರೂ ಹೊಸ ದಾಖಲೆ ಬರೆಯಲಿದ್ದಾರೆ. ಜೋಶಿ ಆ ದಾಖಲೆ ಮುರಿಯುವ ತವಕದಲ್ಲಿದ್ದರೆ, 1996ರಿಂದ ಕ್ಷೇತ್ರದ ಮೇಲಿನ ಹಿಡಿತ ಕಳೆದುಕೊಂಡಿರುವ ಕಾಂಗ್ರೆಸ್ ಗೆಲುವಿಗೆ ಹವಣಿಸುತ್ತಿದೆ. ಅಭ್ಯರ್ಥಿ ವಿನೋದ ಆಸೂಟಿ ಗೆದ್ದರೆ ಮೊದಲ ಯತ್ನದಲ್ಲೇ ಗೆಲುವು ಸಾಧಿಸಿದ ಜನನಾಯಕ ಆಗಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ (ETV Bharat) ಕಾಂಗ್ರೆಸ್ನ ಸರೋಜಿನಿ ಮಹಿಷಿ ಹಾಗೂ ಡಿ.ಕೆ. ನಾಯ್ಕರ್ ತಲಾ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೆ, ಬಿಜೆಪಿಯ ವಿಜಯ ಸಂಕೇಶ್ವರ ಸತತ 3 ಬಾರಿ, ಕಾಂಗ್ರೆಸ್ ಡಿ.ಪಿ. ಕರಮಕರ ಸತತ 2 ಬಾರಿ ಆಯ್ಕೆಯಾಗಿದ್ದರು. ಬಿಜೆಪಿಯ ಹಾಲಿ ಸಂಸದ ಪ್ರಲ್ಹಾದ್ ಜೋಶಿ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಈವರೆಗೆ ಯಾರೂ ಕೂಡ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಉದಾಹರಣೆಗಳಿಲ್ಲ. ಆದುದರಿಂದಲೇ ಈ ಕ್ಷೇತ್ರದಲ್ಲಿ ಯಾರೇ ಗೆದ್ದರು ಹೊಸ ದಾಖಲೆ ಸೃಷ್ಟಿಯಾಗಲಿದೆ.
ಇದನ್ನೂ ಓದಿ:ಪರಿಷತ್ ಚುನಾವಣೆ: ಜೆಡಿಎಸ್ ಜೊತೆಗಿನ ಮೈತ್ರಿ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮೇ 11ರಂದು ಬಿಜೆಪಿ ಸಭೆ - BJP Meeting