ಹುಬ್ಬಳ್ಳಿ: ನಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದೆ ಇಡೋದ್ರಲ್ಲಿ ತಪ್ಪೇನಿದೆ?. ಹಾಗಾದರೆ ಗ್ಯಾರಂಟಿ ಕೊಟ್ಟ ಮೇಲೆ ಕಾಂಗ್ರೆಸ್ ಏಕೆ ಪ್ರಚಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು. ನಗರದಲ್ಲಿಂದು ಮಾತನಾಡಿದ ಅವರು, ಲಾಡ್ ಅವರು ಮನಸ್ಸಿಗೆ ಬಂದ ರೀತಿಯಲ್ಲಿ ಮಾತನಾಡುತ್ತಾರೆ. ಮೇಲಿನಿಂದ ನಿರ್ದೇಶನ ಇರೋ ಕಾರಣಕ್ಕೆ ಹಾಗೇ ಮಾತನಾಡಿರಬೇಕು. ಕಾಂಗ್ರೆಸ್ನವರು ಉದ್ರಿ ಭಾಗ್ಯಗಳ ಬಗ್ಗೆ ಪ್ರಚಾರ ಮಾಡಿದರೇ ನಡೆಯುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಕೋಲಾರದ ಅನ್ನ ಭಾಗ್ಯ ಬಗ್ಗೆ ಪ್ರಚಾರ ಮಾಡುತ್ತಾರೆ. ಕಾಂಗ್ರೆಸ್ ಒಂದು ಕಾಳು ಅಕ್ಕಿ ಕೊಡಲಾಗಿಲ್ಲ. ಕೇಂದ್ರದ ಅಕ್ಕಿಯನ್ನು ನಾವೇ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಮುದ್ರಾಂಕ ಶುಲ್ಕ, ವಾಹನ ತೆರಿಗೆ ಸೇರಿ ಎಲ್ಲ ಶುಲ್ಕ ಏರಿಕೆಯಾಗಿದೆ. ಉಚಿತ ಗ್ಯಾರಂಟಿ ಕೊಟ್ಟ ಮೇಲೆ ಪ್ರಚಾರ ಏಕೆ ಮಾಡುತ್ತೀರಾ. ನಾವೇನು ಕೆಲಸ ಮಾಡಿದ್ದೇವೆ ಎಂದು ಹೇಳುವುದು ಸಹಜ ಪ್ರಕ್ರಿಯೆ. ನಾವು ಅಭಿವೃದ್ಧಿ ನೀಡಿದ್ದರ ಬಗ್ಗೆ ಹೇಳುತ್ತಿದ್ದೇವೆ. ಕಾಂಗ್ರೆಸ್ನವರು ಕೊಡದೇ ಇರೋದರ ಬಗ್ಗೆ ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.
ನಾಲ್ಕು ಕೋಟಿ ಮನೆ ನಿರ್ಮಾಣ ಸುಳ್ಳು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿ ಮನೆ ನಿರ್ಮಾಣವಾಗಿವೆ. ಲಾಡ್ ಅವರು ಹಳ್ಳಿಗೆ ಹೋಗಿಲ್ಲ. ಹಾಗಾಗಿ ಅವರಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಜೋಶಿ ಅವರು ಹುಬ್ಬಳ್ಳಿ ಇಂದಿರಾ ಗಾಜಿನ ಮನೆ ಅವರಣದಲ್ಲಿ ಬಾಬುಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆ ಮಾಡಿದರು. ದೇಶದಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕ ಬಾಬು ಜಗಜೀವನ ರಾಮ್ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಮರಿಸಿದರು.